ಪರಿಸ್ಥಿತಿಯನ್ನು ದೂಷಿಸದೆ, ನಾವು ಮೊದಲು ಬದಲಾಯಿಸಿಕೊಳ್ಳಬೇಕಾದದ್ದು ನಮ್ಮ ಪ್ರಸ್ತುತ ಮನಸ್ಥಿತಿಯನ್ನೇ. ನಮ್ಮ ಪ್ರಾರ್ಥನೆ ಅದಕ್ಕಾಗಿಯೇ ಇರಬೇಕು.

ಒಬ್ಬ ಬಾಲಕನು ದೇವಸ್ಥಾನಕ್ಕೆ ಹೋಗಿ ಪ್ರಾರ್ಥಿಸುತ್ತಿದ್ದಾನೆ: “ದೇವರೇ, ದಯವಿಟ್ಟು ಅಮೇರಿಕಾದ ರಾಜಧಾನಿಯನ್ನು ಚೀನಾ ಮಾಡು.” ಇದನ್ನು ಕೇಳಿ, ಅತ್ತ ಬಂದು ನಿಂತ ಒಬ್ಬ ವ್ಯಕ್ತಿ ಕೇಳಿದ, “ಏಕೆ ಹೀಗೆ ಪ್ರಾರ್ಥಿಸುತ್ತಿದ್ದೀಯ ಮಗು?”
“ಪರೀಕ್ಷೆಯಲ್ಲಿ ನಾನು ಅಮೇರಿಕಾದ ರಾಜಧಾನಿ ಚೀನಾ ಅಂತ ಬರೆದಿದ್ದೆ. ನಂತರ, ಅದು ತಪ್ಪು ಎಂದು ತಿಳಿದುಬಂತು. ನನ್ನ ಉತ್ತರ ಸರಿಯಾಗಿರಲೆಂದು ಹೀಗೆ ಪ್ರಾರ್ಥಿಸುತ್ತಿದ್ದೇನೆ.” ಇದು ಆ ಬಾಲಕನ ಪ್ರತ್ಯುತ್ತರವಾಗಿತ್ತು.
ಇದು ಬಾಲಿಶ ವರ್ತನೆ. ಇದನ್ನಲ್ಲ ನಾವು ಬೆಳೆಸಬೇಕಾದುದು. ಮಗುವಿನಲ್ಲಿರುವ ಹೃದಯ—ನಿರ್ಮಲತೆ ಯನ್ನು ಬೆಳೆಸಬೇಕು. ಶಿಶುತ್ವವು ಬುದ್ಧಿಹೀನತೆ; ಅದು ನಮ್ಮನ್ನು ಕೇವಲ ಅಪಕ್ವತೆಗೆ ಒಯ್ಯುತ್ತದೆ.
ನೀರಿನಲ್ಲಿ ಈಜುವುದನ್ನು ಕಲಿಯಲು ನೀವು ಹೋದಾಗ, ಕಲಿಸುವವನು ಯಾವಾಗಲೂ ನಿಮ್ಮೊಂದಿಗಿದ್ದರೆ, ನೀವು ತ್ವರಿತವಾಗಿ ಈಜು ಕಲಿಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ನಾವು ನಮ್ಮ ಸ್ವಂತ ಶಕ್ತಿಯನ್ನು ಬೆಳೆಸಿಕೊಳ್ಳಬೇಕು.
ಜೀವನದ ಯಾವುದೇ ಪರಿಸ್ಥಿತಿಯನ್ನು ಜಯಿಸಲು ನಾವು ನಮ್ಮೊಳಗಿನ ಶಕ್ತಿಯನ್ನು ಕಂಡುಕೊಳ್ಳಬೇಕು. ಇದು ನಮ್ಮ ಮನೋಭಾವವನ್ನು ಬದಲಾಯಿಸುವ ಮೂಲಕ ಮಾತ್ರ ಸಾಧ್ಯ. ಇಲ್ಲದಿದ್ದರೆ, ಸನ್ನಿವೇಶಗಳನ್ನು ದೂಷಿಸುವುದರಿಂದ, ಅಥವಾ ಅವು ಬದಲಾಗದ ಕಾರಣ ಹತಾಶರಾಗುವುದರಿಂದ, ಜೀವನವನ್ನು ವ್ಯರ್ಥಗೊಳಿಸುತ್ತೇವೆ.
ಏರ್ ಕಂಡೀಷನ್ಡ್ ಕಾರುಗಳಲ್ಲಿ ಸಂಚರಿಸುವವರನ್ನು ನಾವು ನೋಡುತ್ತೇವೆ. ಮನಸ್ಸಿನ ಶಾಂತಿ ಇಲ್ಲದಿದ್ದರೆ, ಏಸಿ ಕಾರಿನಲ್ಲಿ ಪ್ರಯಾಣಿಸುವುದರಿಂದ ಏನು ಉಪಯೋಗ? ಪರಿಸರವನ್ನು ಸರಿಪಡಿಸುವುದು ಮಾತ್ರ ಸಾಕಾಗುವುದಿಲ್ಲ. ಏಸಿ ಕೊಠಡಿಯಲ್ಲಿ ಮಲಗಿ ಆತ್ಮಹತ್ಯೆ ಮಾಡಿಕೊಳ್ಳುವವರು ಸಹ ಇದ್ದಾರೆ.
ಆದರೆ, ಮನೋಭಾವವನ್ನು ಸರಿಪಡಿಸಿದರೆ, ನಾವು ಯಾವುದೇ ಪರಿಸ್ಥಿತಿಯನ್ನು ನಗುಮುಖದಿಂದ ಎದುರಿಸಬಹುದು. ನಮ್ಮ ಹಿತಕ್ಕಾಗಿ ಇತರರನ್ನು ಅವಲಂಬಿಸುವ ಬದಲು, ನಾವು ಆತ್ಮವಿಶ್ವಾಸ ಬೆಳೆಸಿಕೊಳ್ಳುವುದು ಸೂಕ್ತ. ಅದರ ಮೂಲಕ ಮಾತ್ರ ನಮಗೆ ನಿಜವಾದ ಸಮಾಧಾನ ಸಿಗುತ್ತದೆ.

Download Amma App and stay connected to Amma