ಮಕ್ಕಳೇ, ಭಗವಂತನು ನಮ್ಮನ್ನು ರಕ್ಷಿಸುತ್ತಾನೆಯೇ ಹೊರತು. ನಾವು ಭಗವಂತನನ್ನು ರಕ್ಷಿಸುವವರಲ್ಲ.

ಮಕ್ಕಳೇ, ನದಿಗೆ ನೀರಿನ ಅಗತ್ಯವಿಲ್ಲ. ಆದರೆ ಮಡಕೆಗೆ ನದಿಯ ನೀರಿನ ಅಗತ್ಯವಿದೆ. ಆಗಲೇ ಮಡಕೆ ಶುದ್ಧವಾಗುತ್ತದೆ. ನಮ್ಮ ಮನಸ್ಸು ಇಂದು ಕಳಂಕಗಳಿಂದ ತುಂಬಿದ ಮಡಕೆಯಾಗಿದೆ. ಭಗವಂತನೆಂಬ ನದಿಯಲ್ಲಿನ ನೀರನ್ನು ತುಂಬಿಸಿಯೇ ನಮ್ಮ ಮನಸ್ಸೆಂಬ ಮಡಕೆಯನ್ನು ಶುದ್ಧಗೊಳಿಸಬೇಕು. ಕಳಂಕಗಳಿಂದ ತುಂಬಿದ ಮನಸ್ಸನ್ನು ಶುದ್ಧೀಕರಿಸಿ ವಿಶಾಲಗೊಳಿಸಲು, ಹಾಗೂ ನಾವು ಎಲ್ಲರನ್ನೂ ಪ್ರೀತಿಸಿ, ನಿಸ್ವಾರ್ಥ ಸೇವೆ ಸಲ್ಲಿಸಲು ಸಾಧ್ಯವಾಗಬೇಕಾದರೆ, ನಮಗೆ ಭಗವಂತನ ಕೃಪೆ ಅತ್ಯಗತ್ಯ.
ಮಕ್ಕಳೇ, ಈ ಲೋಕದಲ್ಲಿ ನಮ್ಮ ಪ್ರಧಾನ ಕರ್ತವ್ಯವೆಂದರೆ, ಅಸಹಾಯಕರಿಗೆ ನೆರವು ನೀಡುವುದು. ಭಗವಂತನಿಗೆ ನಮ್ಮಿಂದ ಏನೂ ಬೇಕಿಲ್ಲ. ಆತ ಸದಾ ಸಂಪೂರ್ಣ. ಭಗವಂತನಿಗೆ ಏನಾದರೂ ಅಗತ್ಯವಿದೆ ಎಂದು ಭಾವಿಸುವುದು, ಸೂರ್ಯನಿಗೆ ಮೇಣದಬತ್ತಿಯ ಬೆಳಕನ್ನು ತೋರಿಸಿ, ‘ಸೂರ್ಯಭಗವಾನನೇ, ನನ್ನ ಬೆಳಕಿನಲ್ಲಿ ಭೂಮಿಯನ್ನು ಪ್ರಕಾಶಗೊಳಿಸು’ ಎಂದು ಹೇಳುವಂತೆ.
ಬಡಜನರ ಮತ್ತು ಕಷ್ಟದಲ್ಲಿರುವವರೊಡನೆ ಸಹಾನುಭೂತಿಯಿಂದ ವರ್ತಿಸುವುದೇ, ಭಗವಂತನಿಗೆ ನಾವು ಸಲ್ಲಿಸುವ ಕರ್ತವ್ಯ. ನಿಸ್ವಾರ್ಥ ಲೋಕಸೇವೆಯೇ ಆತ್ಮಾನ್ವೇಷಣೆಯ ಪ್ರಾರಂಭ. ಮೂರನೇ ಕಣ್ಣು ತೆರೆಯಲು, ಎರಡು ಕಣ್ಣುಗಳನ್ನು ಮುಚ್ಚಿ ಅನೇಕರು ಧ್ಯಾನ ಮಾಡುತ್ತಾರೆ. ಅದು ಎಂದಿಗೂ ಆಗುವುದಿಲ್ಲ. ಆಧ್ಯಾತ್ಮಿಕತೆಯ ಹೆಸರಿನಲ್ಲಿ ಈ ಲೋಕದತ್ತ ಕಣ್ಣು ಮುಚ್ಚಿಕೊಳ್ಳಲು ಸಾಧ್ಯವಿಲ್ಲ. ಯಾವುದೇ ಪ್ರಗತಿಯೂ ಆಗುವುದಿಲ್ಲ. ಎರಡೂ ಕಣ್ಣು ತೆರೆದಿರುವಾಗಲೇ ಎಲ್ಲದರಲ್ಲೂ ಏಕತ್ವವನ್ನು ಕಾಣುವುದೇ ಆತ್ಮಸಾಕ್ಷಾತ್ಕಾರ, ಅಥವಾ ಆಧ್ಯಾತ್ಮಿಕ ಪೂರ್ಣತೆ. ಅದೇ ಮೂರನೇ ಕಣ್ಣು.
ಮೊಗ್ಗಾಗಿರುವಾಗ ಒಂದು ಹೂವಿನ ಸೌಂದರ್ಯವನ್ನು ಮತ್ತು ಸುಗಂಧವನ್ನು ಯಾರೂ ತಿಳಿಯಲು ಅಥವಾ ಆಸ್ವಾದಿಸಲು ಸಾಧ್ಯವಿಲ್ಲ. ಆದರೆ ಹೂವು ಅರಳಿದಾಗ ಅದರ ಕಾಂತಿಯೂ ಸುವಾಸನೆಯೂ ಸುತ್ತಲೂ ಹರಡುತ್ತದೆ. ನಮ್ಮ ಹೃದಯ ಈಗ ಮೊಗ್ಗಿನಂತೆ ಮುಚ್ಚಿಕೊಂಡು ಕುಳಿತಿದೆ. ಭಗವಂತನಲ್ಲಿ ಶ್ರದ್ಧಾಭಕ್ತಿ, ಎಲ್ಲರ ಬಗ್ಗೆ ತೋರುವ ಪ್ರೇಮ ಮತ್ತು ಕರುಣೆ, ಧಾರ್ಮಿಕ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಈ ಹೃದಯದ ಹೂವು ಅರಳಿ ವಿಕಾಸಗೊಳ್ಳುತ್ತದೆ. ಅದರ ಸುಗಂಧ ಮತ್ತು ಸೌಂದರ್ಯ ಸುತ್ತಲೂ ಹರಡಿ ಇಡೀ ಜಗತ್ತಿಗೆ ಒಂದು ವರವಾಗಿ ಪರಿಣಮಿಸುತ್ತದೆ.
ಇಲ್ಲಿಯವರೆಗೆ ನಾನು ಹೇಳಿದ್ದೆಲ್ಲವೂ ಟಾನಿಕ್ ಶೀಶೆಯ ಲೇಬಲ್ ಮಾತ್ರ. ಲೇಬಲ್ ಓದಿದ ಮಾತ್ರಕ್ಕೇ ‘ಟಾನಿಕ್’ ನ ಫಲ ಸಿಗುವುದಿಲ್ಲ. ಅದನ್ನು ಸೇವಿಸಿದಾಗ ಮಾತ್ರ ಅದರ ಫಲ ಸಿಗುವುದು. ಕಾಗದದ ಮೇಲೆ ಜೇನುತುಪ್ಪ ಎಂದು ಬರೆದು ನೆಕ್ಕಿದರೆ ಸಿಹಿ ಸಿಗುವುದಿಲ್ಲ. ವಿಜ್ಞಾನವನ್ನು ಅಧ್ಯಯನ ಮಾಡಿದ ಮಾತ್ರಕ್ಕೇ ಅನುಭವ ಉಂಟಾಗುವುದಿಲ್ಲ. ಧರ್ಮವನ್ನು ಮಾತಿನಿಂದ ಹೇಳಲಾಗದು. ಅದು ಜೀವನಶೈಲಿ. ಅದರ ಸೌಂದರ್ಯವು ಧಾರ್ಮಿಕವಾಗಿ ಜೀವಿಸುವವರ ಮೂಲಕ ಪ್ರಕಟವಾಗುತ್ತದೆ. ಧಾರ್ಮಿಕ ತತ್ವಗಳನ್ನು ಧ್ಯಾನಿಸಬೇಕು. ಜೀವನದಲ್ಲಿ ಅಳವಡಸಿಕೊಳ್ಳಬೇಕು. ಅವುಗಳನ್ನು ಅನುಭವದಿಂದ ಅರಿತುಕೊಳ್ಳಬೇಕು. ಪರಮಾತ್ಮನಲ್ಲಿ ಸಂಪೂರ್ಣ ಶರಣಾಗತಿಯಿಂದ ಆ ಪರಮ ಪದವನ್ನು ಹೊಂದಲು ಎಲ್ಲರಿಗೂ ಸಾಧ್ಯವಾಗಲಿ ಎಂದು ನಾವು ಪ್ರಾರ್ಥಿಸೋಣ.

Download Amma App and stay connected to Amma