ಆಗೋಸ್ಟ್ 30, 2010
ಉತ್ತರ ಕರ್ನಾಟಕ ಹಾಗೂ ಆಂಧ್ರಗಳ ಚರಿತ್ರೆಯಲ್ಲಿ ಅಪಾರ ನೋವು, ನಷ್ಟ ತಂದ ದಿನಗಳು ಸೆಪ್ಟಂಬರ್ 27ರಿಂದ ಅಕ್ಟೋಬರ್ 4ರ ವರೆಗಿನ ಎಂಟು ದಿನಗಳು. ಹಳ್ಳಿಗಳಿಗೆ ಹಳ್ಳಿಗಳೇ ಜಲಾವೃತವಾಗಿ ಪ್ರಪಂಚದ ಗಮನ ಸೆಳೆಯಿತು. ಈ ಪ್ರವಾಹಪೀಡಿತ ಕರ್ನಾಟಕ ಹಾಗೂ ಆಂಧ್ರಪ್ರದೇಶದ ತಮ್ಮ ಮಕ್ಕಳ ನೆರವಿಗೆ ತಲಪಲು ಅಮ್ಮ ತಡ ಮಾಡಲಿಲ್ಲ.
ಪ್ರವಾಹದ ನೀರು ಇನ್ನೂ ಇಳಿಯುವ ಮೊದಲೇ ಕರ್ಣಾಟಕದ ಬೆಳಗಾಂವಿ, ರಾಯಚೂರು, ಬಳ್ಳಾರಿ, ಬಿಜಾಪುರಗಳಿಗೆ, ಬ್ರಹ್ಮಚಾರಿಗಳು, ಭಕ್ತರು ಮತ್ತು ಡಾಕ್ಟರುಗಳನ್ನೊಳಗೊಂಡ ತಂಡ ಧಾವಿಸಿತು. ಈ ಕರ್ತವ್ಯ ನಿರತ ತಂಡ ವಿಳಂಬವಿಲ್ಲದೆ ವೈದ್ಯಕೀಯ ಸೇವೆ, ಸೌಲಭ್ಯ, ತುರ್ತು ಪರಿಸ್ಥಿತಿಯಿರುವಲ್ಲೆಲ್ಲಾ ಪ್ರವಾಹ ಪೀಡಿತರಿಗೆ ಲಭಿಸುವಂತೆ ಮಾಡಿತು. ಅಲ್ಲದೆ ಆಹಾರ ಸಾಮಗ್ರಿಗಳು, ಹಾಸುವ, ಹೊದೆಯುವ ಬಟ್ಟೆಗಳನ್ನು ಉಚಿತವಾಗಿ ಹಂಚಲಾಯಿತು.
ವಿವಿಧೆಡೆಗಳಲ್ಲಿ 2000 ಮನೆಗಳ ನಿರ್ಮಾಣಕ್ಕೆಂದು ಅಮ್ಮ 50 ಕೋಟಿ ರುಪಾಯಿಗಳ ಯೋಜನೆಯನ್ನು ಹಮ್ಮಿಕೊಂಡರು. ರಾಯಚೂರಿನಲ್ಲಿ ಮೊದಲನೇ ಘಟ್ಟದ ಕೆಲಸ 2ನೇ ಫೆಬ್ರವರಿಗೆ ಆರಂಭವೂ ಆಯಿತು
ಬ್ರಹ್ಮಚಾರಿ ಪ್ರೇಮಾಮೃತ ಚೈತನ್ಯ, ಬ್ರಹ್ಮಚಾರಿ ಬಾಬು ರಾವ್, ಬ್ರಹ್ಮಚಾರಿ ರಾಮಕೃಷ್ಣ ಮೊದಲಾಗಿ ನಾಲ್ಕಾರು ಬ್ರಹ್ಮಚಾರಿಗಳು ಅಲ್ಲೇ ನೆಲೆಸಿ ಮೇಲ್ವಿಚಾರಣೆ ಮತ್ತು ನಿರ್ಮಾಣ ಕೆಲಸದಲ್ಲಿ ತೊಡಗಿದ್ದರು. ನೆಲದಿಂದ ಒಂದೂವರೆ ಅಡಿ ಎತ್ತರದಲ್ಲಿ ನಿರ್ಮಾಣಗೊಂಡಿರುವ ಈ ಮನೆಗಳಿಗೆ ಮುಂದೆ, ಹಿಂದೆ ಹಾಗೂ ಅಕ್ಕಪಕ್ಕಗಳಲ್ಲಿ ಸಾಕಷ್ಟು ಖಾಲಿಜಾಗಗಳನ್ನು ಬಿಡಲಾಗಿದೆ. ಕೃಷಿಕರಾದ ಜನರು ದನಕರುಗಳನ್ನು ಸಾಕಿಕೊಳ್ಳಲು, ತರಕಾರಿ ಹೂವು ಹಣ್ಣುಗಳನ್ನು ಬೆಳೆದುಕೊಳ್ಳಲು ಸಾಕಷ್ಟು ಅನುವು ಮಾಡಿಕೊಡಲಾಗಿದೆ. ಬಚ್ಚಲುಮನೆಯನ್ನು ಮನೆಯ ಒಳಗೇ ಒದಗಿಸಿ, ಕಕ್ಕಸು ಮನೆಯನ್ನು ಹಿತ್ತಲಲ್ಲಿ ಕಟ್ಟಲಾಗಿದೆ. ಅಡುಗೆ ಮನೆಯಲ್ಲಿ ಸ್ಲಾಬ್‌ಗಳನ್ನು ಅಳವಡಿಸಲಾಗಿದೆ. ಮನೆ ಮನೆಗೂ ನೀರಿನ ಟ್ಯಾಂಕ್ ಇರುವ ಕಾರಣ ಮನೆಯವರು ನಲ್ಲಿ ಮೂಲಕ ನೀರನ್ನು ಬಳಸಿಕೊಳ್ಳಬಹುದು.
ಮಾರ್ಚ್ 22ರಂದು ಕರ್ನಾಟಕದ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪ ಅವರು ರಾಯಚೂರು ಜಿಲ್ಲೆಯಲ್ಲಿ ಪ್ರವಾಹ ಸಂತ್ರಸ್ತರಿಗಾಗಿ ನಡೆದಿರುವ ಮನೆನಿರ್ಮಾಣ ಸ್ಥಳಗಳಿಗೆ ಭೇಟಿಯಿತ್ತಾಗ ಡೋಂಗರಾಂಪುರದಲ್ಲಿ ಮಾತಾ ಅಮೃತಾನಂದಮಯಿ ಮಠವು ನಿರ್ಮಿಸಿರುವ ಮನೆಗಳನ್ನು ವೀಕ್ಷಿಸಿದರು. ಆ ಸಂದರ್ಭದಲ್ಲಿ ಮಠದ ಬ್ರಹ್ಮಚಾರಿ ಅಭಯಾಮೃತ ಚೈತನ್ಯ ಅವರು ಸ್ಯಾಂಪಲ್ ಮನೆಯೊಂದನ್ನು ಮುಖ್ಯಮಂತ್ರಿಗಳಿಗೂ ಇತರ ಮಂತ್ರಿ ಮತ್ತು ಅಧಿಕಾರಿಗಳಿಗೂ ತೋರಿಸಿದರು. ಸ್ವಾತಂತ್ರ್ಯಾನಂತರದಿಂದ ಇಷ್ಟರವರೆಗಿನ, ಹಿಂದಿನ ಸರ್ಕಾರಗಳ ಯಾವುದೇ ದುರಂತ ಪರಿಹಾರ ಕಾರ್ಯಕ್ಕಿಂತ, ತನ್ನ ಸರ್ಕಾರವೇ ಅತ್ಯಂತ ಶೀಘ್ರವಾಗಿ ಪ್ರವಾಹಪೀಡಿತರಿಗಾಗಿ ಮನೆ ನಿರ್ಮಿಸಿ ದಾಖಲೆ ಸಾಧಿಸಿದೆ ಎಂದ ಮುಖ್ಯಮಂತ್ರಿಯವರು, ಈ ದಾಖಲೆಯಲ್ಲಿ ಮಾತಾ ಅಮೃತಾನಂದಮಯಿ ಮಠವು ವಾಗ್ದಾನದ ಗಡುವಿನ ಅವಧಿಗೂ ಮುನ್ನವೇ ಮನೆಗಳನ್ನು ನಿರ್ಮಿಸಿ ಪೂರೈಸಿದ ಮೊದಲ ಸಂಸ್ಥೆಯಾಗಿ ಮುಖ್ಯಪಾತ್ರ ವಹಿಸಿದೆ, ಎಂದೂ ಗುರುತಿಸಿದರು.
ಸರಕಾರವು ಆಶ್ರಮಕ್ಕೆ ನಿವೇಶನ ಮಂಜೂರು ಮಾಡಿದ ಕೇವಲ ಇಪ್ಪತ್ತೇ ದಿನಗಳಲ್ಲಿ (ಡೋಂಗರಾಂಪುರದಲ್ಲಿ) ಸಂಪೂರ್ಣ ಕಟ್ಟಿ ಮುಗಿಸಿದ 100 ಮನೆಗಳನ್ನು ಸರಕಾರಕ್ಕೆ ಹಸ್ತಾಂತರ ಮಾಡುವ ದಾಖಲೆಯನ್ನು ಅಮ್ಮನ ಆಶ್ರಮವು ನಿರ್ಮಿಸಿದೆ; ಎಲ್ಲ ಕ್ಷೇತ್ರಗಳ ವಕ್ತಾರರಿಂದ ಮುಕ್ತ ಪ್ರಶಂಸೆಗೆ ಭಾಜನವಾಗಿದೆ.
ಇನ್ನೂ 242 ಮನೆಗಳನ್ನು ಅಗೋಸ್ಟ್ 4ರಂದು ಕರ್ಣಾಟಕ ಸರಕಾರಕ್ಕೆ ಹಸ್ತಾಂತರಿಸಿತು. ಮೊದಲು ಮಠ ಕಟ್ಟಿದ ಮನೆಗಳನ್ನು ಅಮೂಲಗ್ರವಾಗಿ ಪರಿಶೀಲಿಸಿದ ನಂತರವೇ, ಅಂದಿನ ಸಮಾರಂಭದಲ್ಲಿ ನೂತನ ಮನೆಗಳ ಕೀಲಿ ಕೈಗಳನ್ನು ಸ್ವೀಕರಿಸಿದ ಮುಖ್ಯ ಮಂತ್ರಿ ಯಡಿಯೂರಪ್ಪನವರು “ಮಾತಾ ಅಮೃತಾನಂದಮಯಿ ದೇವರಿದ್ದಂತೆ, ಅವರು ನಿರ್ಮಿಸಿಕೊಟ್ಟಿರುವ ಈ ಮನೆಗಳು ದೇವಾಲಯಗಳಿದ್ದಂತೆ, ಪ್ರತಿ ದಿನ ಅವರನ್ನು ಸ್ಮರಿಸಿಕೊಳ್ಳಿ; ನಿಮಗೆಲ್ಲರಿಗೂ ಒಳ್ಳೆಯದಾಗುತ್ತದೆ” ಎಂದು ಸಂತ್ರಸ್ತರನ್ನುದ್ದೇಶಿಸಿ ನುಡಿದರು. ಈ ದಿನವನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ ಎಂದ ಅವರು ಈ ಕಾರ್ಯದಲ್ಲಿ ನೆರವಾದ ಸಂಘ ಸಂಸ್ಥೆಗಳು ಹಾಗೂ ಮಠ ಮಾನ್ಯಗಳ ಸಹಕ್ಕಾರಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು”
ಇನ್ನುಳಿದ ಮನೆಗಳ ಕೆಲಸವೂ ಭರಾಟೆಯಿಂದ ಮುಂದುವರೆದಿದೆ.