ಒಬ್ಬ ವ್ಯಕ್ತಿಯ ಹೆಂಡತಿ ತೀರಿಕೊಂಡಳು. ಅವಳ ಆತ್ಮಶಾಂತಿಗಾಗಿ ಪ್ರಾರ್ಥನೆ ನಡೆಸಲು, ಗಂಡನು ಒಬ್ಬ ಪುರೋಹಿತನನ್ನು ಕರೆತಂದನು.

ಅವರು ಕಾರ್ಯಗಳನ್ನು ನಡೆಸುತ್ತಿದ್ದ ಸಮಯದಲ್ಲಿ, ಈ ಮಂತ್ರವನ್ನು ಜಪಿಸಿದರು: ‘ಲೋಕಾಃ ಸಮಸ್ತಾಃ ಸುಖಿನೋ ಭವಂತು’. ಅದರ ಅರ್ಥ ಗಂಡನಿಗೆ ತಿಳಿಯಲಿಲ್ಲ. ಅವನು ನೇರವಾಗಿ ಪುರೋಹಿತರನ್ನು ಕೇಳಿದ, “ನೀವು ಪಠಿಸಿದ ಮಂತ್ರದ ಅರ್ಥವೇನು?” ಪುರೋಹಿತರು ವಿವರಿಸಿದರು, “‘ಈ ಲೋಕದಲ್ಲಿರುವ ಎಲ್ಲರೂ ಸುಖಿಗಳಾಗಲಿ; ಎಲ್ಲರೂ ಐಶ್ವರ್ಯವಂತರಾಗಿ ಮತ್ತು ಶಾಂತಿಯುತರಾಗಿರಲಿ.'”
ಮಂತ್ರವನ್ನು ಅರ್ಥಮಾಡಿಕೊಂಡಾಗ, ಅವನು ಪುರೋಹಿತರನ್ನು ಕೇಳಿದ, “ನನ್ನ ಹೆಂಡತಿಯ ಆತ್ಮಕ್ಕಾಗಿ ಪ್ರಾರ್ಥಿಸಲು ನಾನು ನಿಮ್ಮನ್ನು ಕರೆತಂದಿದ್ದೇನೆ. ಆದರೆ ನೀವು ಪಠಿಸಿದ ಮಂತ್ರದಲ್ಲಿ, ನನ್ನ ಹೆಂಡತಿಯ ಹೆಸರೋ ಅಥವಾ ಅವಳ ಆತ್ಮದ ಬಗ್ಗೆಯೋ ಏನೂ ಸೂಚಿಸಿಲ್ಲ, ಹೌದೇ?”
“ಈ ರೀತಿ ಪ್ರಾರ್ಥಿಸಲು ನನ್ನ ಗುರು ನನಗೆ ಕಲಿಸಿದ್ದಾರೆ. ವಾಸ್ತವವಾಗಿ, ಇಡೀ ಜಗತ್ತಿಗಾಗಿ ನಾವು ಪ್ರಾರ್ಥಿಸಿದಾಗಲೇ ನಿಮ್ಮ ಹೆಂಡತಿಯ ಆತ್ಮಕ್ಕೆ ನಿಜವಾದ ಶಾಂತಿ ಮತ್ತು ಮೋಕ್ಷ ಸಿಗುತ್ತದೆ. ಬೇರೆ ರೀತಿಯಲ್ಲಿ ಪ್ರಾರ್ಥಿಸಲು ನನಗೆ ತಿಳಿದಿಲ್ಲ,” ಎಂದು ಪುರೋಹಿತರು ಉತ್ತರ ನೀಡಿದರು.
ಇತರ ಮಾರ್ಗವಿಲ್ಲದೆ, ಕೊನೆಯಲ್ಲಿ ಗಂಡನು ಪುರೋಹಿತರಿಗೆ ಹೇಳಿದ, “ಸರಿ, ಆದರೆ ಕನಿಷ್ಠಪಕ್ಷ, ನಮ್ಮ ಉತ್ತರ ದಿಕ್ಕಿನಲ್ಲಿರುವ ನೆರೆ ಮನೆಯವರನ್ನು ಮಾತ್ರ ಅದರಿಂದ ಬಿಟ್ಟುಬಿಡಬಹುದೇ? ಅವರಿಗೆ ನಮ್ಮ ಮೇಲೆ ತುಂಬಾ ಹಗೆತನ ಇದೆ. ಅವರನ್ನು ಬಿಟ್ಟು ಉಳಿದೆಲ್ಲರಿಗಾಗಿ ಬೇಕಾದರೂ ನೀವು ಪ್ರಾರ್ಥಿಸಬಹುದು.”
ಮಕ್ಕಳೇ, ಇಂದು ನಮ್ಮ ಮನೋಭಾವವು ಈ ರೀತಿಯಲ್ಲಿದೆ. ಇದನ್ನಲ್ಲ ನಾವು ಪೋಷಿಸಬೇಕಾದದ್ದು. ಇದು ಬದಲಾಗಬೇಕು, ಸಂಪೂರ್ಣವಾಗಿ ಮಾರ್ಪಾಡಾಗಬೇಕು. ಮಂತ್ರಗಳು ನಾಲಿಗೆಯಿಂದ ಉಚ್ಚರಿಸುವುದಕ್ಕೆ ಮಾತ್ರ ಮೀಸಲಾಗಿಲ್ಲ. ಅವು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ತತ್ವಗಳಾಗಿವೆ. ಹಾಗಾದಾಗ ಮಾತ್ರ ನಮ್ಮ ಪೂರ್ವಜರ ಮುನ್ನೋಟ ನನಸಾಗುತ್ತದೆ. ನಮ್ಮ ಪ್ರಾರ್ಥನೆಗೆ ಪೂರ್ಣ ಫಲ ಸಿಗುತ್ತದೆ.

Download Amma App and stay connected to Amma