ಧರ್ಮ ಜೀವನದ ಒಂದು ಅವಿಭಾಜ್ಯ ಅಂಗ (ಮಾರ್ಗದರ್ಶಿ). ಒಬ್ಬರನ್ನೊಬ್ಬರು ಪ್ರೀತಿಸುವುದು, ಪರಸ್ಪರ ಸೇವೆ ಮಾಡುವುದು, ಕ್ಷಮಿಸುವುದು, ಸಹನೆಯಿಂದಿರುವುದು, ಮತ್ತು ಕರುಣಾಮಯವಾಗಿ ವರ್ತಿಸುವುದು – ಎಂಬ ಈ ಗುಣಗಳನ್ನು ಕಲಿಸುವುದೇ ಧರ್ಮ.

ಅದ್ವೈತವು ಒಂದು ಅನುಭವ. ಆದಾಗ್ಯೂ, ಅದನ್ನು ದೈನಂದಿನ ಜೀವನದಲ್ಲಿ ಪ್ರೇಮ ಮತ್ತು ಕರುಣೆಯ ರೂಪದಲ್ಲಿ ಪ್ರಕಟಿಸಬಹುದು. ಸನಾತನ ಧರ್ಮದ ಗುರುಗಳಾದ ಋಷಿಮುನಿಗಳು ಮತ್ತು ಮಹಾತ್ಮರು ನಮಗೆ ಬೋಧಿಸುವುದು ಈ ಮಹಾನ್ ಪಾಠವನ್ನೇ.
ನಾವು ಮರೆತುಹೋಗಿರುವ ಧರ್ಮದ ಭಾಷೆಯೇ ಕರುಣೆಯ ಭಾಷೆ. ಧರ್ಮವು ಬೋಧಿಸುವ ಪ್ರೇಮ ಮತ್ತು ಪರಸ್ಪರ ವಿಶ್ವಾಸದ ಭಾಷೆಯನ್ನು ನಾವು ಮರೆತುಬಿಟ್ಟಿದ್ದೇವೆ. ಇಂದು ಜಗತ್ತಿನಲ್ಲಿ ಕಾಣುವ ಎಲ್ಲ ಸಮಸ್ಯೆಗಳ ಮೂಲಕಾರಣ, ಪ್ರೇಮ ಮತ್ತು ಕರುಣೆಯ ಅಭಾವವೇ.
ವ್ಯಕ್ತಿಗತ ಜೀವನದ ಸಮಸ್ಯೆಗಳು, ರಾಷ್ಟ್ರದ ಸಮಸ್ಯೆಗಳು, ಮುಂತಾದ ಜಗತ್ತಿನ ಸಮಸ್ತ ಸಮಸ್ಯೆಗಳಿಗೂ ಕಾರಣ, ಧರ್ಮವು ಉಪದೇಶಿಸುವ ಪ್ರೇಮ ಮತ್ತು ಕರುಣೆಯನ್ನು ನಾವು ಅಳವಡಿಸಿಕೊಳ್ಳಲು (ಆಂತರೀಕರಿಸಲು) ವಿಫಲರಾಗಿದ್ದರಿಂದ. ಊಟ ಮತ್ತು ನಿದ್ರೆಯಂತೆ, ಧರ್ಮವು ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು.
ಇಂದು ಧರ್ಮಕ್ಕೆ ಒಂದು ಪುನರುಜ್ಜೀವನದ ಅಗತ್ಯವಿದೆ. ಅದಕ್ಕೆ ಒಂದು ಹೊಸ ಜೀವನ ಮತ್ತು ಶಕ್ತಿಯನ್ನು ನೀಡಬೇಕಾಗಿದೆ. ಆಗ ಮಾತ್ರವೇ ಕರುಣೆ ಮತ್ತು ಪ್ರೇಮವು ನಮ್ಮ ಹೃದಯಗಳಲ್ಲಿ ಉದಯಿಸುತ್ತವೆ. ಪ್ರೇಮ ಮತ್ತು ಕರುಣೆ ಮಾತ್ರವೇ ಅಂಧಕಾರವನ್ನು ದೂರಿಕರಿಸಿ, ಜಗತ್ತಿನಲ್ಲಿ ಬೆಳಕು ಮತ್ತು ಪಾವಿತ್ರ್ಯವನ್ನು (ಪವಿತ್ರತೆಯನ್ನು) ಹರಡಬಲ್ಲವು.
ಪ್ರೇಮ ಎಲ್ಲೆಡೆ ಇದೆ. ಆದರೆ, ಜಗತ್ತಿನಲ್ಲಿ ನಾವು ನೋಡುವ ಎಲ್ಲ ಪ್ರೇಮವೂ ನಿಜವಾದ ಪ್ರೇಮವಲ್ಲ. ನಾವು ನಮ್ಮ ಕುಟುಂಬದ ಸದಸ್ಯರನ್ನು ಪ್ರೀತಿಸುತ್ತೇವೆ. ಆದರೆ ನಮ್ಮ ನೆರೆಹೊರೆಯವರನ್ನು ಅದೇ ರೀತಿ ಪ್ರೀತಿಸುವುದಿಲ್ಲ. ನಾವು ನಮ್ಮ ಮಗನನ್ನು ಅಥವಾ ಮಗಳನ್ನು ಪ್ರೀತಿಸುತ್ತೇವೆ. ಆದರೆ ಇತರ ಮಕ್ಕಳನ್ನು ಅದೇ ರೀತಿ ಪ್ರೀತಿಸಲು ನಾವು ಸಿದ್ಧರಿಲ್ಲ. ನಮ್ಮ ತಾಯಿತಂದೆಯರನ್ನು ಪ್ರೀತಿಸುವಂತೆ ಬೇರೆಯವರನ್ನು ನಾವು ಪ್ರೀತಿಸುವುದಿಲ್ಲ.
ನಾವು ನಮ್ಮ ಧರ್ಮವನ್ನು ಪ್ರೀತಿಸುತ್ತೇವೆ. ಆದರೆ ಇತರ ಧರ್ಮಗಳನ್ನು ಪ್ರೀತಿಸುವುದಿಲ್ಲ. ನಮ್ಮ ದೇಶವನ್ನು ನಾವು ಪ್ರೀತಿಸುವಂತೆ ಇತರ ದೇಶಗಳನ್ನು ನಾವು ಪ್ರೀತಿಸುವುದಿಲ್ಲ; ವಾಸ್ತವವಾಗಿ, ಇತರ ದೇಶಗಳ ಜನರೊಂದಿಗೆ ನಮಗೆ ಹಗೆತನವೂ ಇದೆ. ಆದ್ದರಿಂದ, ನಮ್ಮದು ನಿಜವಾದ ಪ್ರೇಮವಲ್ಲ; ಅದು ಒಂದು ಸೀಮಿತವಾದ ಬಾಂಧವ್ಯವಾಗಿದೆ. ಈ ಸೀಮಿತ ಹಾಗೂ ಸಂಕುಚಿತ ಬಾಂಧವ್ಯವನ್ನು ದಿವ್ಯ ಪ್ರೇಮವಾಗಿ ಪರಿವರ್ತಿಸುವುದೇ ಆಧ್ಯಾತ್ಮಿಕತೆಯ ಗುರಿಯಾಗಿದೆ.

Download Amma App and stay connected to Amma