ಅಮ್ಮನ ಬಳಿ ವಿವಿಧ ಸ್ವಭಾವದ ಅನೇಕ ಜನರು ಬರುತ್ತಾರೆ. ಅನೇಕ ಕುಟುಂಬ ಸಮಸ್ಯೆಗಳು ಸಣ್ಣ ವಿಷಯಗಳಿಂದ ಶುರುವಾಗುತ್ತವೆ. ಜೀವನವು ಸಮಸ್ಯೆಗಳಿಂದ ತುಂಬಿದೆ. ಸ್ವಲ್ಪ ತಾಳ್ಮೆ ಇದ್ದರೆ, ನಾವು ಅನೇಕ ಸಮಸ್ಯೆಗಳನ್ನು ತಪ್ಪಿಸಬಹುದು.

ಒಮ್ಮೆ ಪತಿ ಪತ್ನಿಯರು ಅಮ್ಮನ ಬಳಿಗೆ ಬಂದರು. ಹೆಂಡತಿಗೆ ಕೆಲವೊಮ್ಮೆ ಮಾನಸಿಕ ಸಮತೋಲನ ಸ್ವಲ್ಪ ತಪ್ಪುತ್ತಿತ್ತು. ಯಾವುದಾದರೂ ಒತ್ತಡ ಉಂಟಾದಾಗ ಇದು ಸಂಭವಿಸುತ್ತಿತ್ತು. ಆಗ ಅವರು ಏನು ಹೇಳುತ್ತಿದ್ದಾರೆಂದು ಅವರಿಗೇ ತಿಳಿಯುತ್ತಿರಲಿಲ್ಲ. ಆದರೆ ಅವರಿಗೆ ಗಂಡನ ಮೇಲೆ ಬಹಳ ಪ್ರೀತಿಯಿತ್ತು.
ಇದನ್ನು ತಿಳಿದುಕೊಂಡು, ಅಮ್ಮ ಆ ಗಂಡನಿಗೆ ಹೇಳಿದರು, “ಮಗು, ಸ್ವಲ್ಪ ಗಮನವಿಟ್ಟರೆ ಸಾಕು. ಆ ಹುಡುಗಿ ಯಾವುದಾದರೂ ಅವಿವೇಕದ ಮಾತು ಹೇಳಿದರೂ, ಅದು ಅವಳ ಅನಾರೋಗ್ಯದ ಕಾರಣ ಎಂದು ತಿಳಿದು ನೀನು ಸಹಿಸಿಕೊಳ್ಳಬೇಕು. ಕ್ರಮೇಣ ಈ ಕಾಯಿಲೆ ಸರಿಯಾಗುತ್ತದೆ.”
ಆದರೆ, ಆ ಗಂಡನು ಅದನ್ನು ಲೆಕ್ಕಿಸಲಿಲ್ಲ. “ನಾನೇಕೆ ಸುಮ್ಮನಿರಬೇಕು? ಅವಳು ನನ್ನ ಹೆಂಡತಿ ಅಲ್ಲವೇ?” ಇದು ಆತನ ಮನೋಭಾವವಾಗಿತ್ತು. ಇದರ ಪರಿಣಾಮ ಏನಾಯಿತು? ಮನೆಯಲ್ಲಿ ಜಗಳ ಹೆಚ್ಚಾಯಿತು. ಹೆಂಡತಿಯ ಅನಾರೋಗ್ಯ ಹೆಚ್ಚಾಯಿತು. ಅವಳ ಕುಟುಂಬದವರು ಅವಳನ್ನು ಕರೆದುಕೊಂಡು ಹೋದರು. ಆ ಗಂಡನ ಜೀವನವೇ ಚೂರುಚೂರಾಯಿತು. ಅವನು ಮದ್ಯಪಾನಿಯಾದ. ಸಂಪತ್ತೆಲ್ಲವನ್ನೂ ಕುಡಿದು ಕಳೆದನು. ತನ್ನ ಜೀವನವನ್ನು ನರಕವನ್ನಾಗಿ ಮಾಡಿಕೊಂಡನು.
ಹೆಂಡತಿಯ ಕಾಯಿಲೆಯನ್ನು ಅರ್ಥಮಾಡಿಕೊಂಡು, ಅದಕ್ಕೆ ತಕ್ಕಂತೆ ಸಹನೆಯಿಂದ, ಪ್ರೀತಿಯಿಂದ ನಡೆದುಕೊಂಡಿದ್ದರೆ, ಇದು ಸಂಭವಿಸುತ್ತಿರಲಿಲ್ಲ. ಆದ್ದರಿಂದ ಮಕ್ಕಳೇ, ಪ್ರತಿಯೊಂದು ಪರಿಸ್ಥಿತಿಯನ್ನೂ ಅರ್ಥಮಾಡಿಕೊಂಡು ನಡೆದುಕೊಳ್ಳಬೇಕು.

Download Amma App and stay connected to Amma