ನೀನು ಜಗತ್ತಿನಲ್ಲಿ ಬಾಳು, ಕೆಲಸ ಮಾಡು, ಸುಖಗಳನ್ನು ಅನುಭವಿಸು; ಆದರೆ ಒಂದು ವಿಷಯವನ್ನು ಯಾವಾಗಲೂ ನೆನಪಿಡು – ಪ್ರಾಪಂಚಿಕ ಸಂಪಾದನೆ, ಹುಡುಕಾಟ ಮತ್ತು ಶೇಖರಣೆಗಳೆಲ್ಲಾ ಬೋಳು ತಲೆಗೆ ಬಾಚಣಿಗೆ ತೆಗೆದಿಟ್ಟುಕೊಂಡಂತೆ.

ಮಕ್ಕಳು ಕೇಳಬಹುದು, “ಇದರ ಅರ್ಥ ಜಗತ್ತನ್ನು ತ್ಯಜಿಸಿ, ಕಾಡಿಗೆ ಹೋಗಿ, ಕಣ್ಣುಮುಚ್ಚಿ ಕೂತಿರಬೇಕೆಂದೇ ?” ಅಲ್ಲ. ಜಗತ್ತನ್ನು ತ್ಯಜಿಸಬೇಕೆಂದೂ ಅಲ್ಲ. ಆದರೆ ಆಲಸ್ಯ ಮತ್ತು ಅಜ್ಞಾನ ಸರಿಯಲ್ಲ. ಯಾವುದೇ ಕಾಲದಲ್ಲಿ, ಹೇಗೇ ಬದುಕಿದರೂ, ಸಮಯ ಬಂದಾಗ ಸಾವು ಬಂದೇ ಬರುತ್ತದೆ.

ಎಲ್ಲವನ್ನೂ ನಾವು ಕ್ಷಣಮಾತ್ರದಲ್ಲಿ ಕಳೆದುಕೊಳ್ಳಬಹುದು, ಸೋಲನ್ನು ಅನುಭವಿಸಬಹುದು. ಇದ್ದಿದ್ದೆಲ್ಲವನ್ನೂ ಬಿಟ್ಟು ಹೋಗಲೇಬೇಕು. ನಾವು ಗಳಿಸಿದ್ದು, ಸಂಪಾದಿಸಿದ್ದು, ನಮ್ಮದೆಂದು ಭಾವಿಸಿದ್ದು—ಏನೂ ನಮ್ಮ ಸಹಾಯಕ್ಕೆ ಬರುವುದಿಲ್ಲ. ಅದಕ್ಕಾಗಿಯೇ ಧರ್ಮಶಾಸ್ತ್ರ ಹೇಳುತ್ತದೆ: “ಜೀವನದ ಉದ್ದೇಶ ಕೇವಲ ದೇಹವನ್ನು ರಕ್ಷಿಸುವುದು ಮತ್ತು ಪೋಷಿಸುವುದು ಮಾತ್ರವಲ್ಲ; ನಿಮ್ಮ ಆತ್ಮಸ್ವರೂಪವಾದ ಪೂರ್ಣತೆಯನ್ನು ಅರಿಯುವುದೂ ಆಗಿದೆ.”

ಜಗತ್ತಿನ ಅನಿತ್ಯ ಸ್ವಭಾವವನ್ನು ಅರ್ಥಮಾಡಿಕೊಂಡವನು ತೊಂದರೆಗಳನ್ನು ಎದುರಿಸುವಾಗ ದುರ್ಬಲನಾಗುವುದಿಲ್ಲ, ಆತ್ಮವಿಶ್ವಾಸವನ್ನು ಕಳೆದುಕೊಳ್ಳುವುದಿಲ್ಲ; ಸಂತೋಷದಿಂದ ಜೀವನವನ್ನು ಸ್ವೀಕರಿಸುತ್ತಾನೆ. 

ಈಜಲು ತಿಳಿಯದವನಿಗೆ ಸಮುದ್ರದ ಅಲೆಗಳನ್ನು ಎದುರಿಸುವುದು ಕಷ್ಟ—ಅವನು ಮುಳುಗಿಹೋಗಬಹುದು. ಆದರೆ, ಈಜು ಬಲ್ಲವನಿಗೆ ಅಲೆಗಳೊಂದಿಗೆ ಆಡುವುದು ಆನಂದದಾಯಕ. ಅಲೆಗಳು ಅವನನ್ನು ಸೋಲಿಸಲಾರವು. ಅಂತೆಯೇ, ಲೌಕಿಕ ಸುಖಗಳ ಅಸ್ಥಿರತೆಯನ್ನು ಅರ್ಥಮಾಡಿಕೊಂಡವನಿಗೆ ಜೀವನದ ವೈರುಧ್ಯಗಳು ಆನಂದದ ಕ್ರೀಡೆಯಾಗಿ ಕಂಡುಬರುತ್ತದೆ. ಅವನು ಸುಖ-ದುಃಖಗಳನ್ನು ಸಮಭಾವದಿಂದ ನಗುತ್ತಾ ಸ್ವಾಗತಿಸುತ್ತಾನೆ.

ಆದರೆ, ಈ ತತ್ವವನ್ನು ಅರ್ಥಮಾಡಿಕೊಳ್ಳದವನಿಗೆ ಜೀವನವು ಸಹಿಸಲಸಾಧ್ಯವಾಗುತ್ತದೆ, ನಿರಂತರ ದುಃಖದಿಂದ ಕೂಡಿರುತ್ತದೆ. ಧರ್ಮವು ಜೀವನದ ಸವಾಲುಗಳನ್ನು ಶಾಂತಿ ಮತ್ತು ಸಮತೋಲನದಿಂದ ಎದುರಿಸಲು ಶಕ್ತಿ ಮತ್ತು ಧೈರ್ಯವನ್ನು ನೀಡುತ್ತದೆ. ಇದು ಜೀವನವನ್ನು ಸಂತೋಷ, ಆತ್ಮವಿಶ್ವಾಸ ಮತ್ತು ಉತ್ಸಾಹದಿಂದ ಸ್ವೀಕರಿಸಲು ಮಾರ್ಗಸೂಚಿಯಾಗುತ್ತದೆ. ಧಾರ್ಮಿಕ ತತ್ವಗಳನ್ನು ಚೆನ್ನಾಗಿ ಅನುಸರಿಸುವವನ ಜೀವನವು, ನಿಷ್ಕಳಂಕವಾದ ಮಗುವಿನ ಆಟದಂತೆ, ಪೂರ್ಣ ಆನಂದದಿಂದ ಕೂಡಿರುತ್ತದೆ.