ಜೀವನದಲ್ಲಿ ಎರಡೇ ಸಂಗತಿಗಳಿವೆ – ಕರ್ಮ ಮಾಡುವುದು ಮತ್ತು ಫಲವನ್ನು ಅನುಭವಿಸುವುದು.

ಅನೇಕರು ಹೇಳುವುದುಂಟು, ‘ಇದುವರೆಗೂ ನಾನು ತಿಳಿದೂ ತಿಳಿದೂ ಯಾವ ತಪ್ಪನ್ನೂ ಮಾಡಿಲ್ಲ, ಆದರೂ ಈ ಕಷ್ಟಗಳನ್ನೆಲ್ಲಾ ಅನುಭವಿಸಬೇಕಾಗಿದೆ’ ಎಂದು. ಒಂದು ವಿಷಯ ಖಂಡಿತ. ನಾವು ಮಾಡಿದ ಕರ್ಮದ ಫಲವನ್ನು ನಾವೇ ಅನುಭವಿಸಬೇಕು. ಅದರ ಫಲವನ್ನು  ತಪ್ಪಿಸಲು ಸಾಧ್ಯವೇ ಇಲ್ಲ.

ಸಾವಿರಾರು ಹಸುಗಳ ನಡುವೆ ಒಂದು ಕರುವನ್ನು ಬಿಟ್ಟರೆ, ಅದು ಅದರ ತಾಯಿಯ ಬಳಿಗೇ ಹೋಗಿ ಸೇರುತ್ತದೆ. ಅದೇ ರೀತಿ ಪ್ರತಿಯೊಬ್ಬರೂ ಅವರವರ ಕರ್ಮಫಲವನ್ನು ಅವರೇ ಅನುಭವಿಸುತ್ತಾರೆ. ಈಶ್ವರನು, ಶಿಕ್ಷಿಸಲೆಂದೇ ಯಾರನ್ನೂ ಸೃಷ್ಟಿಸಿಲ್ಲ.

ಒಳ್ಳೆಯ ಕರ್ಮಕ್ಕೆ ಒಳ್ಳೆಯ ಫಲವಿದ್ದರೆ, ಕೆಟ್ಟ ಕರ್ಮಕ್ಕೆ ಕೆಟ್ಟ ಫಲವಿದೆ. ಕೈಕಾಲುಗಳಿಂದ ಮಾಡುವುದು ಮಾತ್ರವೇ ಕರ್ಮವಲ್ಲ, ಆಲೋಚನೆಯೂ ಕರ್ಮವೇ. ಇತರರನ್ನು ದೂಷಿಸುವುದು ದುಷ್ಕರ್ಮ, ಅದರ ಫಲವೂ ದುಃಖಕರವಾಗಿಯೇ ಇರುತ್ತದೆ.

ಆದುದರಿಂದ ನಾವು ಅನುಭವಿಸುತ್ತಿರುವ ಕಷ್ಟಗಳನ್ನು ನೆನೆದು, ನಾನು ಪಾಪಿ ಎಂದು ಚಿಂತಿಸಿ ದುಃಖಿಸುವ ಅಗತ್ಯವಿಲ್ಲ. ಕೆಟ್ಟ ಕರ್ಮಗಳ ಫಲವನ್ನು ಇಂದು ಅನುಭವಿಸುತ್ತಿದ್ದೇವೆ, ಮುಂದೆ ಇದು ಪುನರಾವರ್ತಿಸಬಾರದು ಎಂದು ಯೋಚಿಸಿ, ಜೀವಿತದ ಮುಂದಿನ ಕ್ಷಣಗಳನ್ನು ಒಳ್ಳೆಯ ಕರ್ಮಗಳಿಂದ ತುಂಬಿಸುವ ನಿರ್ಧಾರ ಕೈಗೊಳ್ಳುವುದು ಸೂಕ್ತ.

‘ಏನೂ ಸರಿಯಾಗದವನು, ನಾನೊಬ್ಬ ಪಾಪಿ’ ಎಂದು ಯೋಚಿಸದೇ, ತನ್ನನ್ನು ತಾನೇ ಶಪಿಸಿಕೊಳ್ಳದೆ, ಎಲ್ಲವನ್ನೂ ಈಶ್ವರನ ಇಚ್ಛೆಗೆ ಬಿಟ್ಟುಕೊಡುತ್ತಾ, ಕಾರುಣ್ಯ ಮತ್ತು ಸೇವೆ ತುಂಬಿದ ಜೀವನವನ್ನು ನಡೆಸುವುದೇ, ಶಾಂತಿ ಕಂಡುಕೊಳ್ಳಲು ಸುಲಭದ ಮಾರ್ಗವಾಗಿದೆ.