ಪ್ರಶ್ನೆ: ಅಮ್ಮನಿಗೇಕೆ ಈ ವೇಷ ?* ಶಂಕರಾಚಾರ್ಯರೂ, ಶ್ರೀ ರಾಮಕೃಷ್ಣರೂ, ಚಟ್ಟಾಂಬಿ ಸ್ವಾಮಿಗಳೂ, ನಾರಾಯಣ ಗುರುಗಳೂ,** ಮತ್ತಿತರರೂ ಇಷ್ಟೆಲ್ಲ ವಸ್ತ್ರಧರಿಸಿ ಅಲಂಕರಿಸಿ ಕೊಂಡಿರಲಿಲ್ಲವಲ್ಲ ?
“ಮಕ್ಕಳೇ, ಹಾಗಿದ್ದ ಮೇಲೆ ಶಂಕರಾಚಾರ್ಯರು ಮಾತ್ರ ಸಾಕಾಗಿತ್ತಲ್ಲ ಲೋಕವನ್ನು ಉದ್ಧರಿಸಲು ? ಒಬ್ಬರ ಹಾಗೆ ಇನ್ನೊಬ್ಬರಿಲ್ಲ. ಶ್ರೀ ರಾಮನ ಹಾಗಿರಲಿಲ್ಲ ಶ್ರೀ ಕೃಷ್ಣ. ಶ್ರೀ ರಾಮಕೃಷ್ಣರ ಹಾಗಿರಲಿಲ್ಲ ರಮಣ ಮಹರ್ಷಿ. ಪ್ರತಿಯೊಂದು ಅವತಾರಕ್ಕೂ ಒಂದು ಉದ್ದೇಶ ಲಕ್ಷ್ಯಗಳಿದೆ. ಅವರು ಅನುಸರಿಸುವ ಮಾರ್ಗವೂ ಬೇರೆ ಬೇರೆಯಾಗಿರುತ್ತದೆ. ಒಬ್ಬರ ಹಾಗೆ ಇನ್ನೊಬ್ಬರು ಮಾಡಬೇಕೆಂದೇನಿಲ್ಲ.

ಮಕ್ಕಳೇ, ವಕೀಲನ ವೇಷ ನೋಡುವಾಗ ನಮಗೆ ಕೇಸಿನ ಕುರಿತು, ಅದರ ಜಯದ ಕುರಿತು ನೆನಪು ಬರುತ್ತದೆ. ಇದೇ ರೀತಿ, ಅಮ್ಮನ ಈ ವೇಷ ನಿಮ್ಮಲ್ಲಿಯ ಪರಮಾರ್ಥ ತತ್ವವನ್ನು ನೆನಪು ಮಾಡಿಸಲಿಕ್ಕಾಗಿ.
ಒಂದು ಕಥೆ ಕೇಳಿಲ್ಲವೇ; ಒಬ್ಬ ದೊಡ್ಡ ಧುರೀಣನನ್ನು ಒಮ್ಮೆ ಒಂದು ಸಮ್ಮೇಳನಕ್ಕೆ ಆಮಂತ್ರಿಸಿದ್ದರು. ಬರೇ ಒಬ್ಬ ಸಾಮಾನ್ಯನ ಬಟ್ಟೆ ಧರಿಸಿ ಅವನು ಅಲ್ಲಿ ಹೋಗಿ ಮುಟ್ಟಿದ. ಆದರೆ ಅಲ್ಲಿದ್ದವರು ಅವನನ್ನು ಆದರಿಸಲಿಲ್ಲ, ಒಳಗೆ ಹೋಗಲೂ ಬಿಡಲಿಲ್ಲ. ಆ ವ್ಯಕ್ತಿ ಹೋಗಿ ಪ್ಯಾಂಟು, ಕೋಟು, ಷೂಸು ಇತ್ಯಾದಿಗಳಿಂದ ಅಲಂಕೃತನಾಗಿ ಹಿಂತಿರುಗಿದ. ಆಗ ಆ ವ್ಯಕ್ತಿಯನ್ನು ಅಲ್ಲಿರುವವರು ಸ್ವಾಗತಿಸಿ ಕೂತುಕೊಳ್ಳಿಸಿದರು. ಭೂರಿ ಭೋಜನವನ್ನೂ ನೀಡಿದರು. ಆ ವ್ಯಕ್ತಿ ತನ್ನ ಕೋಟು, ಷೂಸು ಇತ್ಯಾದಿ ಬಿಚ್ಚಿ ಆಹಾರ ವಸ್ತುಗಳ ಎದುರಿಗೆ ಇಟ್ಟನು. ಉಳಿದವರು ಆಶ್ಚರ್ಯದಿಂದ ಕಾರಣ ಕೇಳಿದರು. ಆ ವ್ಯಕ್ತಿ ಹೇಳಿದ, ’ ನಾನೇ ಮೊದಲು ಸಾಧಾರಣ ಬಟ್ಟೆಯಲ್ಲಿ ಬಂದಾಗ ನೀವು ಕಡೆಗಣಿಸಿದಿರಿ. ಅದೇ ನಾನು ಪ್ಯಾಂಟು, ಕೋಟು ಧರಿಸಿ ಬಂದಾಗ ನೀವು ಆದರಿಸಿದಿರಿ. ಹಾಗಾದರೆ ಗೌರವಿಸಿದ್ದೂ ಆದರಿಸಿದ್ದೂ ನನ್ನನ್ನಲ್ಲ, ಈ ವಸ್ತ್ರವನ್ನು. ಆದಕಾರಣ ವಸ್ತ್ರ ಉಣ್ಣಲಿ ಆಹಾರವನ್ನು.’
ಪ್ರಪಂಚವಿಂದು ವೇಷದ ಮೇಲೆ ನಿಂತಿದೆ. ಆ ವೇಷ ಇಲ್ಲದಾಗಿಸಲು ಈ ವೇಷ ಬೇಕಾಗುತ್ತದೆ. ನಿಮ್ಮ ವೇಷ ಇಲ್ಲದಾಗಿಸಲು ಅಮ್ಮನಿಗೆ ಈ ವೇಷ ಹಾಕಿಕೊಳ್ಳಬೇಕಾಗುತ್ತದೆ.
ಮಕ್ಕಳೇ, ಅಮ್ಮನನ್ನು ನಂಬಬೇಕೆಂದೋ, ಅಮ್ಮ ದೇವರೆಂತಲೋ, ಮೇಲೆ ದೇವರೊಬ್ಬನು ಇದ್ದಾನಂತಲೋ ಅಮ್ಮ ಹೇಳುತ್ತಿಲ್ಲ. ನಿಮ್ಮಲ್ಲಿ ವಾಸಿಸುವ ಈಶ್ವರ***ನನ್ನು ಅರಿತುಕೊಳ್ಳಿ. ಮಕ್ಕಳೇ, ಸೆಗಣಿಯಲ್ಲಿ ಶಕ್ತಿ (ಗೋಬರ್ ಗ್ಯಾಸ್) ಹುದುಗಿಕೊಂಡಿರುವಂತೆ, ಹಾಲಿನಲ್ಲಿ ಬೆಣ್ಣೆಯೆಂಬಂತೆ ನಿಮ್ಮಲ್ಲಿ ದೇವರ ಶಕ್ತಿ ಹುದುಗಿ ಕೊಂಡಿದೆ. ಅದನ್ನು ಅರಿತುಕೊಳ್ಳುವುದೇ ಬಾಳಿನ ಗುರಿ.”
- *ಇದು ದೇವಿ ಭಾವದಲ್ಲಿ ಅಮ್ಮ ಉಪಯೋಗಿಸುವ ವರ್ಣಮಯ ಬಟ್ಟೆಗಳ ಕುರಿತಾದ ಪ್ರಶ್ನೆ. ಅಮ್ಮ ಭಾರತದಲ್ಲಿ ದೇವಿ ಭಾವ ದರ್ಶನ ಕೊಡುವುದು ನಿಲ್ಲಿಸಿ ಎಷ್ಟೋ ವರ್ಷಗಳಾಗಿವೆ. ವಿದೇಶಗಳಲ್ಲಿ ಇನ್ನೂ ದೇವಿ ಭಾವ ದರ್ಶನ ನಡೆಯುತ್ತಿದೆ.
- ** ಚಟ್ಟಾಂಬಿ ಸ್ವಾಮಿಗಳೂ, ನಾರಾಯಣ ಗುರುಗಳೂ ಕ್ರಮವಾಗಿ 19ನೇ ಹಾಗೂ 20ನೇ ಶತಮಾನದ, ಕೇರಳದಲ್ಲೆಲ್ಲ ಮಹತ್ತರ ಸಾಮಾಜಿಕ ಬದಲಾವಣೆ ತಂದ ಪ್ರಖ್ಯಾತ ಆಧ್ಯಾತ್ಮಿಕ ನೇತಾರರು.
- *** ದೇವರನ್ನು ಸೂಚಿಸಲು ಮಲೆಯಾಳದಲ್ಲಿ “ಈಶ್ವರ” ಶಬ್ದವನ್ನು ಉಪಯೋಗಿಸುತ್ತಾರೆ.

Download Amma App and stay connected to Amma