ಪ್ರಶ್ನೆ: ತಪಸ್ಸಿನಿಂದ ಶಕ್ತಿ ಹೇಗೆ ಉಂಟಾಗುತ್ತದೆ ?
“ಒಂಬತ್ತು ಕವಲುಗಳಿರುವ ಒಂದು ನದಿಯಿದೆ. ಅದರ ಪ್ರವಾಹಕ್ಕೆ ಬಲವಿಲ್ಲ. ಆದರೆ ಆ ಒಂಬತ್ತು ಕವಲುಗಳನ್ನು ಮುಚ್ಚಿ ನದಿಯಲ್ಲಿ ಮಾತ್ರ ನೀರು ಹರಿಯಲು ಬಿಟ್ಟರೆ, ಪ್ರವಾಹ ಶಕ್ತಿಶಾಲಿಯಾಗುತ್ತದೆ. ಆ ಶಕ್ತಿಯಿಂದಲೇ ಕರೆಂಟ್ ಉತ್ಪಾದಿಸುತ್ತಾರೆ. ಇದೇ ತರ ನಿಮ್ಮ ಆಲೋಚನೆಗಳನ್ನು, ಬಹುಮುಖವಾಗಿ ಹಾರುವ ಮನಸ್ಸನ್ನು, ಏಕತ್ವದಲ್ಲಿ ಕೇಂದ್ರೀಕರಿಸಿದರೆ, ನಿಮ್ಮಲ್ಲಿ ನಿಶ್ಚಯವಾಗಿಯೂ ಈ ಶಕ್ತಿ ಉಂಟಾಗುತ್ತದೆ. ಇತರರಿಗೆ ಶರೀರ ಮೂಲಕವೂ, ಮನಸ್ಸು ಮೂಲಕವೂ, ಬುದ್ಧಿ ಮೂಲಕವೂ, ಪ್ರವೃತ್ತಿ ಮೂಲಕವೂ, ಮಾತು ಮೂಲಕವೂ, ಈ ಶಕ್ತಿಯನ್ನು ಉಪಯೋಗಿಸಿ ಪ್ರಯೋಜನ ನೀಡಲು ಸಾಧ್ಯವಿದೆ. ಲೌಕಿಕರು ಕಾಮ ತೃಪ್ತಿಗಾಗಿ ತಮ್ಮ ಶಕ್ತಿಯನ್ನು ನಶಿಸುತ್ತಾರೆ. ಆಧ್ಯಾತ್ಮಿಕ ಜೀವಿಗಳು ಕಾಮವನ್ನು ನಿಯಂತ್ರಿಸಿ ಯೋಗದೊಂದಿಗೆ ಅದನ್ನು ಊರ್ಧ್ವಮುಖವಾಗುವಂತೆ ಮಾಡಿ ಶಕ್ತಿಯುತವಾಗಿಸುತ್ತಾರೆ. ಸಾಧಾರಣದವನಿಗೆ ಸ್ವಾರ್ಥಪರತೆಯಿಂದ ಐವರನ್ನು ಪ್ರೇಮಿಸಲು ಸಾಧ್ಯವಾದರೆ ಒಬ್ಬ ಯೋಗಿಗೆ ನಿಸ್ವಾರ್ಥತೆಯಿಂದ ಜಗತ್ತನ್ನೆಲ್ಲ ಪ್ರೇಮಿಸುವ ಸಾಮರ್ಥ್ಯ, ಈ ಮೂಲಕ ಸಿಗುತ್ತದೆ. ಆದರೂ ಅವರ ಶಕ್ತಿ ಇದರಿಂದ ಕಮ್ಮಿಯೇನೂ ಆಗುವುದಿಲ್ಲ.”
ಪ್ರಶ್ನೆ: ಲೋಕದಲ್ಲಿ ಎಷ್ಟೋ ಅನಾಥರಿದ್ದಾರೆ. ನಮ್ಮ ತಪಸ್ಸಿನಿಂದ ಅವರಿಗೇನು ಪ್ರಯೋಜನ ? ಯಾಕಾಗಿ ಅಮ್ಮ ಇಲ್ಲೊಂದು ಅನಾಥಾಲಯ ಕಟ್ಟಿಸಿ ಅನೇಕರನ್ನು ರಕ್ಷಿಸಬಾರದು ?
“ಮಕ್ಕಳೇ, ಅನಾಥಾಲಯ ಕಟ್ಟಿಸಿದರೂ, ಅನಾಥರು ಮತ್ತೂ ಸೃಷ್ಟಿಯಾಗುತ್ತಲೇ ಇರುತ್ತಾರೆ. ಆದರೆ ಅವರಿಗೆ ಒಳ್ಳೇ ಸಂಸ್ಕಾರ ಕೊಟ್ಟರೆ ಮುಂದಕ್ಕೆ ಅನಾಥರಿರುವುದಿಲ್ಲ.
ಪ್ರಶ್ನೆ: ಅವರ ಹಸಿವು ನೀಗಿಸಲು ಬರೇ ಸಂಸ್ಕಾರ ಕೊಟ್ಟರೆ ಸಾಕೆ ?
“ಬರೇ ಊಟ ಮಾಡಿದ ಕಾರಣಕ್ಕೆ ಮಕ್ಕಳಿಗೆ ನಿದ್ದೆ ಬರುತ್ತದೆಯೇ ? ಹೊಟ್ಟೆ ತುಂಬಿಯೂ ’ನನ್ನ ಮನಸ್ಸಿಗೆ ನೆಮ್ಮದಿಯಿಲ್ಲ; ನಿದ್ದೆ ಬರುತ್ತಿಲ್ಲ’ ಎಂದು ಮಕ್ಕಳು ಹೇಳುವುದಿದೆ ಅಲ್ಲವೆ ? ಅಂದರೆ ಹೊಟ್ಟೆ ತುಂಬಿದ್ದರೂ ತೃಪ್ತಿಯಿರುವುದಿಲ್ಲ. ಆದರೆ, ಬಹಳ ದಿನಗಳಿಂದ ಬಯಸಿದ್ದ ಒಂದು ವಸ್ತು ಕೈಗೆ ಸಿಕ್ಕಿದಾಗ ನಾವು ಹಸಿವನ್ನೂ ಮರೆಯುತ್ತೇವೆ. ಮನಸ್ಸಿಗೆ ಸಂತೋಷವೂ ಆನಂದವೂ ಇದ್ದರೆ ಇವೆಲ್ಲದರಿಂದ ಪಾರಾಗಲು ಸಾಧ್ಯವಿದೆ. ಎಲ್ಲಾ ಅವಲಬಿಸಿಕೊಂಡಿರುವುದು ಮನಸ್ಸನ್ನು.”
ಪ್ರಶ್ನೆ: ನಮ್ಮ ಸುತ್ತಲೂ ಎಷ್ಟೋ ಮಂದಿ ಕಷ್ಟ ಕಾರ್ಪಣ್ಯಗಳನ್ನು ಸಹಿಸುತ್ತಿದ್ದಾರೆ; ಬರಿ ಹೊಟ್ಟೆಯಲ್ಲಿ ಮಲಗುತ್ತಾರೆ. ಇದಕ್ಕೆ ಏನು ಮಾಡಲು ಸಾಧ್ಯ?
“ಕೆಲವು ಶ್ರೀಮಂತರ ಮಕ್ಕಳು ಹೇಳುವುದಿದೆ, ಅವರು ದಿವಸಕ್ಕೆ ಎರಡು ಸಾವಿರ ರುಪಾಯಿ, ಮೂರು ಸಾವಿರ ರುಪಾಯಿ ಖರ್ಚು ಮಾಡುತ್ತಾರೆಂದು. ಯಾಕಾಗಿ ? ಆನಂದವೂ, ಸಂತೋಷವೂ ಸಿಕ್ಕಲೆಂದು. ಎರಡು ಮೂರು ಕಾರುಗಳಿದ್ದವರಿದ್ದಾರೆ. ಅವರು ಕಾರ್‌ನಲ್ಲಿ ಸುತ್ತಾಡಿ, ಅನೇಕ ಹೆಂಗಸರಿಗೆ ಉಪದ್ರವ ಮಾಡಿಯೂ, ಹೆಂಡ ಕುಡಿದೂ, ದೊಡ್ಡ ಲಾಡ್ಜ್‌ಗಳಲ್ಲಿ ಏರ್ಕಂಡೀಷನ್ ರೂಮ್ ಮಾಡಿ ಮಲಗಿಕೊಂಡು, ದಿನ ಕಳೆಯುತ್ತಾರೆ. ಆದರೆ ಹೆಂಡ ಕುಡಿದೂ ಅವರಿಗೆ ನಿದ್ದೆ ಬರುವುದಿಲ್ಲ. ಏರ್ಕಂಡೀಷನ್ ರೂಮ್ ತೆಗೆದುಕೊಂಡೂ ಅವರಿಗೆ ಸಮಾಧಾನ ದೊರಕುವುದಿಲ್ಲ. ಅನೇಕ ಹೆಂಗಸರನ್ನು ಕೆಡಿಸಿಯೂ ಅವರಿಗೆ ತೃಪ್ತಿಯೂ ನಿದ್ದೆಯೂ ಇಲ್ಲ. ಕೊನೆಗೆ ನಿದ್ದೆ ಗುಳಿಗೆ ನುಂಗಿ ಮಲಗಿಕೊಳ್ಳುತ್ತಾರೆ. ಅದೂ ಅವರ ಶಕ್ತಿಯನ್ನು ಹಾಳು ಮಾಡಿಕೊಂಡು. ಬಾಹ್ಯ ವಸ್ತುಗಳಲ್ಲಿದೆ ಆನಂದ ಎಂದಾಗಿದ್ದರೆ, ಇಷ್ಟೆಲ್ಲ ಭಂಡತನ ನಡೆಸಿ ತೃಪ್ತಿ ಸಿಗಬೇಕಾಗಿತ್ತಲ್ಲ ? ಒಬ್ಬರ ತೃಪ್ತಿಯ ಸಲುವಾಗಿಯೇ ಇಷ್ಟೆಲ್ಲ ಹಣ ಖರ್ಚು ಮಾಡುತ್ತಾರೆ; ಇತರರಿಗೆ ಅನ್ಯಾಯ ಬಗೆಯುತ್ತಾರೆ.
ಇದೇ ಸಂದರ್ಭ, ಈ ಹಣವಂತನ ಸುತ್ತುಮುತ್ತಲಿರುವವರ ಸ್ಥಿತಿಯೋ ? ಮುಂದಿನ ಮನೆಯಲ್ಲಿ ಒಪ್ಪತ್ತಿನ ಊಟಕ್ಕೂ ಗತಿಯಿಲ್ಲದೆ ತಾಯಿಯೂ ಮಕ್ಕಳೂ ಕುಳಿತು ಅಳುತ್ತಿದ್ದಾರೆ. ಅದರ ಮುಂದಿನ ಮನೆಯಲ್ಲಿ, ವರದಕ್ಷಿಣೆಯಿಲ್ಲದೆ ಮಗಳನ್ನು, ಖಾಲಿಯಾಗಿ ಮನೆಯಲ್ಲೇ ಕೂರಿಸಿದ್ದಾರೆ. ಇನ್ನೂ ಮುಂದಿನ ಮನೆಯಲ್ಲಿ, ಹತ್ತೇ ರುಪಾಯಿಯಲ್ಲಿ ಒಂದು ಕುಟುಂಬದವರು ಸುಖವಾಗಿ ಜೀವನ ಸಾಗಿಸುತ್ತಿದ್ದಾರೆ; ಸಂತೋಷವಾಗಿದ್ದು ಮಲಗಿ ನಿದ್ದೆ ಮಾಡುತ್ತಾರೆ. ಈ ಮೂರು ಮನೆಗಳ ನಡುವೆ ವಾಸಿಸುವ ಈ ಹಣವಂತನು ಆನಂದ ಹೊರಗೆ ಅರಸುತ್ತಾ, ಎಷ್ಟೋ ಹಣ ವ್ಯಯ ಮಾಡುತ್ತಾನೆ. ಆದರೂ, ನೆಮ್ಮದಿ ಸಿಗುತ್ತಿಲ್ಲ. ಆದರೆ ಒಂದು ವಿಶ್ವ ಮನೋಭಾವ ದಕ್ಕಿದರೆ, ಯಥಾರ್ಥ ಆನಂದ ಹೊರಗಲ್ಲ ಒಳಗೆಯೇ ಎಂಬುದನ್ನು ಅರ್ಥ ಮಾಡಿಕೊಂಡರೆ, ಆ ವ್ಯಕ್ತಿಗೆ ಸಮಾಧಾನ ಲಭಿಸುವುದು. ನೆಮ್ಮದಿಯಾಗಿ ನಿದ್ದೆ ಮಾಡಲು ಸಾಧ್ಯವಾಗುತ್ತದೆ. ಬಡವರಲ್ಲಿ ಕರುಣೆಯುಂಟಾಗುತ್ತದೆ; ಹಸಿ ಹೊಟ್ಟೆಯಲ್ಲಿ ಮಲಗುವವರಿಗೆ ಸಹಾಯ ನೀಡುತ್ತಾರೆ; ವರದಕ್ಷಿಣೆಯಿಲ್ಲದೆ ಮನೆಯಲ್ಲೆ ಉಳಿದಿರುವ ಹೆಣ್ಣಿಗೆ ಸಹಾಯವಾಗುತ್ತಾರೆ. ಆ ಹಣವಂತನಿಗೆ ವಿಶ್ವ ಮನೋಭಾವ ಉಂಟಾದರೆ ಸಾಕು, ಆಗ ಎಲ್ಲರಿಗೂ ಸಹಾಯ ಮಾಡಲು ಬೇಕಾಗುವ ಮನೋಸ್ಥಿತಿ ಉಂಟಾಗುತ್ತದೆ.
ಮಕ್ಕಳೇ, ಬಾಹ್ಯ ವಸ್ತುಗಳಲ್ಲಿ ಆನಂದ ಹುಡುಕಿದರೆ ಎಂದಿಗೂ ಪೂರ್ಣ ತೃಪ್ತಿ ಸಿಗದು. ಹಾಲು ಪಾಯಸ ಕುಡಿದು ಸಾಕಾಗಿದೆ ಎಂದಿಟ್ಟುಕೊಳ್ಳೋಣ. ಆದರೆ ಸ್ವಲ್ಪ ಸಮಯ ಕಳೆದ ಮೇಲೆ, ಪುನಃ ಬೇಕಂತ ಆಸೆ ಬರುವುದಿಲ್ಲವೇ ? ಲೌಕಿಕ ಅನುಭವಗಳಿಂದ ತೃಪ್ತಿ ಪಡೆಯಬಹುದೆಂದು ನೀವು ಭಾವಿಸದಿರಿ. ಈಗ ಸಾಕು ಅಂತ ಅನಿಸುತ್ತದೆ. ಐದು ಸೆಕೆಂಡು ಕಳೆದರೆ ಎರಡು ಪಟ್ಟು ಬೇಕೆಂದು ತೋರುತ್ತದೆ. ಇದೇ ಅದರ ಪ್ರಭಾವ. ಆನಂದವು ಹೊರಗಲ್ಲ ಒಳಗೆ ಎಂದು ಮನವರಿಕೆಯಾದಾಗ ನಮಗೆ ನೆಮ್ಮದಿ ಲಭಿಸುತ್ತದೆ; ವಿಶ್ವಮನೋಭಾವವುಂಟಾಗುತ್ತದೆ.
ಮಕ್ಕಳೇ, ದೇವರೆನ್ನುವ ಛತ್ರದಡಿಯಲ್ಲಿ ನಿಮ್ಮನ್ನು ಮಳೆ ತಾಗದಂತೆ ನಿಲ್ಲಿಸೋಣ ಎನ್ನುವುದು ಮಾತ್ರವೇ ಅಮ್ಮನ ಉದ್ದೇಶ. ಕೊಡೆಗೆ ಮತ್ತೊಂದು ಕೊಡೆ ಬೇಡ. ದೇವರಿಗೆ ಯಾವುದರದ್ದೂ ಅವಶ್ಯಕತೆಯಿಲ್ಲ. ದೇವರನ್ನು ಆಶ್ರಯಿಸಿ ಸಿಗುವ ಆ ಗುಣ ಮತ್ತು ಆ ತ್ಯಾಗ ನಮಗೆ ಜಗತ್ತಿನಲ್ಲಿ ಕಾರ್ಯಪ್ರವೃತ್ತರಾಗಲು, ಭಗವಂತನ ಹೆಸರಿನಲ್ಲಿ ಜನಗಳನ್ನು ಪ್ರೀತಿಸುವ ಸಲುವಾಗಿ, ಸೇವೆ ಮಾಡುವ ಸಲುವಾಗಿ ಮಾತ್ರ. ಅದರ ಹೊರತು ದೇವರಿಗೆ ಬೇರೇನೂ ಬೇಕಾಗಿಲ್ಲ. ಸೂರ್ಯನಿಗೆ ಯಾಕೆ ಮೇಣದ ಬತ್ತಿ?”