ಪ್ರಶ್ನೆ: ಅಮ್ಮಾ, ಪ್ರಾರ್ಥನೆ ಹೇಗಿರಬೇಕು ?
“ಲೋಕದ ಏಳಿಗೆಗಾಗಿ ಮಾಡುವ ಪ್ರಾರ್ಥನೆಯೇ ಅತ್ಯಂತ ಶ್ರೇಷ್ಟವಾದದ್ದು. ಆಸೆವಿಹೀನ ನಿಷ್ಕಾಮ ಪ್ರಾರ್ಥನೆ – ಅದುವೇ ಬೇಕಾಗಿರುವುದು. ’ದೇವರೇ, ಲೋಕದ ಕಷ್ಟಗಳನ್ನು ನಿವಾರಿಸು. ದೇವರೇ, ಎಲ್ಲರಿಗೂ ಒಳ್ಳೆಮನಸ್ಸನ್ನು ದಯಪಾಲಿಸು. ದೇವರೇ, ಎಲ್ಲರನ್ನೂ ಕಾಪಾಡು’ ಹೀಗೆ ಪ್ರಾರ್ಥಿಸಿರಿ ಮಕ್ಕಳೇ. ಪೂಜೆಗಾಗಿ ಹೂಗಳನ್ನು ಕೊಯ್ಯುತ್ತೇವೆ. ಆ ಹೂವಿನ ಸೊಬಗನ್ನೂ, ಸುಗಂಧವನ್ನೂ ನಮಗೆ ಅರಿವಿಲ್ಲದೆಯೂ ಮೊದಲು ಆಸ್ವಾದಿಸುವವರು ನಾವೆಯೇ. ’ಲೋಕಕ್ಕೆ ಒಳಿತು ಮಾಡು’ ಎಂದು ಪ್ರಾರ್ಥಿಸುವಾಗ ಸ್ವತಃ ನಾವೇ ಒಳ್ಳೆಯವರಾಗುತ್ತೇವೆ. ದೇವರಿಗೆ ಮಾಡುವ ಸೇವೆ, ಲೋಕಕ್ಕೆ ಮಾಡುವ ಸೇವೆ. ಅದರಲ್ಲಿ ಮೊದಲು ಆನಂದಿಸುವವರು, ಸವಿಯುವವರು ನಾವೇ. ಲೋಕದೊಳಿತಿಗೆ ಪ್ರಾರ್ಥನೆ ನಮ್ಮನ್ನು ವೈಶಾಲ್ಯತೆಡೆಗೊಯ್ಯುತ್ತದೆ.
ಮಕ್ಕಳು ಪ್ರಯಾಣಿಸುತ್ತಿರುವ ಬಸ್ಸಿನಲ್ಲಿ ಒಂದು ಪ್ರಾಯಮೀರಿದ ವೃದ್ಧೆ ನಡುಗುತ್ತಾ ನಿಂತಿದ್ದಾಳೆಎಂದಿಟ್ಟುಕೊಳ್ಳೋಣ. ಯಾರೂ ಅವಳಿಗೆ ಕುಳಿತುಕೊಳ್ಳಲು ಸ್ಥಳ ಬಿಟ್ಟು ಕೊಡುತ್ತಿಲ್ಲ. ಕಿರಿಯರು, ಆರೋಗ್ಯ ಚೆನ್ನಾಗಿರುವವರು ಸೀಟುಗಳಲ್ಲಿ ಹಾಯಾಗಿ ಕೂತಿದ್ದಾರೆ. ವೃದ್ಧೆಗೆ ನಿಂತು ಕೊಂಡಿರಲು ತೀರಾ ಸುಸ್ತು. ಅದನ್ನು ಅರ್ಥ ಮಾಡಿಕೊಂಡ ನೀವು ಎದ್ದು ನಿಂತು ಆ ವೃದ್ಧೆಯನ್ನು ನಿಮ್ಮ ಸೀಟಿನಲ್ಲಿ ಕೂತುಕೊಳ್ಳಿಸಿದಿರಿ; ನೀವು ನಿಂತು ಕೊಂಡಿರಿ. ಕೂತುಕೊಳ್ಳಲು ಸ್ಥಳ ಸಿಕ್ಕಿದ್ದಕ್ಕಾಗಿ ವೃದ್ಧೆಗೆ ಸಂತೋಷವಾಯಿತು; ಜೊತೆಗೆ ನಿಮಗೂ. ’ಸ್ವಂತ ಸುಖವನ್ನು ತ್ಯಜಿಸಿಯಲ್ಲವೇ ನಾನವಳಿಗೆ ಸ್ಥಳ ಕೊಟ್ಟದ್ದು’ ಎಂಬ ಏನೋ ಒಂದು ಸಂತೃಪ್ತಿಯ ಅನುಭವ ನಿಮಗಾಗುತ್ತದೆ. ಈ ರೀತಿ ನಿಷ್ಕಾಮ್ಯತೆಯಿಂದ ನಮಗೆ ಸಂತೃಪ್ತಿಯೂ ದೊರಕುತ್ತದೆ, ಪ್ರಯೋಜನವೂ ದೊರಕುತ್ತದೆ. ವೈಶಾಲ್ಯತೆ ನಮ್ಮದಾಗುತ್ತದೆ. ಅಲ್ಲದೆ ಲೋಕ ಹಿತವೂ ಸಾಧಿಸುತ್ತದೆ. ಆದುದರಿಂದ ನಿಷ್ಕಾಮ ಭಾವನೆಯು ಶ್ರೇಷ್ಠ.”