ಕೆಲಸಗಳನ್ನೆಲ್ಲ ಮಾಡಲಿಕ್ಕೆ ಯಂತ್ರಗಳನ್ನು ಕಂಡು ಹಿಡಿದಿರುವುದರಿಂದ ಇವತ್ತು ಮನುಷ್ಯನಿಗೆ ಒಂದು ಗಂಟೆಯಷ್ಟು ಕೂಡಾ ಕೆಲಸವಿಲ್ಲ. ಸಮಯ ಪೂರ್ತಿ ಮನಸ್ಸು ಬಣಗುಟ್ಟುತ್ತಿರುತ್ತದೆ. ದುರಾಲೋಚನೆಗಳೂ ದುಷ್ಪ್ರವೃತ್ತಿಗಳೂ ಹುಟ್ಟುವುದು ಆಗ. ನಿಮಗೆ ಸಿಗುವ ಸಮಯ ಪೋಲು ಮಾಡದೆ ಸಾಧನೆ ಮಾಡಿದರೆ ಮನಸ್ಸು ಭ್ರಷ್ಟವಾಗುವುದಿಲ್ಲ; ಅನೇಕರಿಗೆ ಸಹಾಯಕವಾಗುವುದು.
ಸಯನ್ಸ್ ಈಗ ಕಂಡು ಹಿಡಿದಿರುವಂಥವುಗಳೋ, ಇನ್ನು ಕಂಡು ಹಿಡಿಯಲಿರುವಂಥವುಗಳೋ, ಯಾವುವೂ ನಿಮಗೆ ಸಮಾಧಾನ ಕೊಡಲು ಸಾಧ್ಯವಿಲ್ಲ. ಅದನ್ನೇನೂ ಅಮ್ಮ ತಪ್ಪೆಂದು ಹೇಳುವುದಿಲ್ಲ. ಇದೆಲ್ಲ ಕಂಡು ಹಿಡಿಯುವ ಕಾರಣ ಹತ್ತು ಜನ ಮಾಡುವ ಕೆಲಸಕ್ಕೆ ಇಬ್ಬರು ಸಾಕಾಗುತ್ತಾರೆ. ಆದರೆ ಮನಸ್ಸಮಾಧಾನದ್ದು, ಅಮ್ಮನ ಲೋಕ. ಅದರಲ್ಲಿ ಅಮ್ಮ ಎಚ್ಚರಿಕೆ ವಹಿಸುವುದು. ಅಮ್ಮ ಯಾರನ್ನೂ ತಪ್ಪೆಂದು ಹೇಳುವುದಿಲ್ಲ. ನಿಮಗೆ ಮನಸ್ಸಮಾಧಾನವಲ್ಲವೇ ಬೇಕಾಗಿರುವುದು. ವಿಜ್ಞಾನಿಗಳ ಡ್ಯೂಟಿ ಅವರು ಮಾಡಲಿ. ಈ ಯಂತ್ರಜ್ಞಾನಿಗಳು ಮತ್ತು ತಂತ್ರಜ್ಞಾನಿಗಳು ನಮಗೆ ಸಮಾಧಾನ ಕೊಡುವುದಿಲ್ಲ. ಅರಮನೆ, ಹೆಣ್ಣು ಎಲ್ಲವೂ ಇದ್ದರೂ ಮನಸ್ಸಿನ ನೆಮ್ಮದಿ ಹೋದಾಗ ಆತ್ಮಹತ್ಯೆಗೆ ಅಣಿಯಾಗುವ ಭಾವ ನಮಗಿರುವುದು. ಇದನ್ನು ಎದುರಿಸಬೇಕಾದರೆ ಅಧ್ಯಾತ್ಮದ ಅವಶ್ಯಕತೆಯಿದೆ. ಆದಕಾರಣ ನೀವು ಸಮಯ ಹಾಳು ಮಾಡದೆ ಆಧ್ಯಾತ್ಮಿಕ ಗ್ರಂಥಗಳನ್ನು ಓದುವುದು, ಸತ್ಸಂಗ ಶ್ರವಣ ಮಾಡುವುದು, ಅದನ್ನು ಮನನ ಮಾಡಿ ಜೀವನದಲ್ಲಿ ಅಳವಡಿಸಿಕೊಳ್ಳುವುದು, ಇತರರ ಜೀವನದಲ್ಲಿ ಹರಡುವುದು – ಇವೆಲ್ಲ ಮಾಡಬೇಕು. ಇದಾಗಿರಬೇಕು ನಮ್ಮ ಗುರಿ. ಅದಕ್ಕೆ ಸಾಧನೆ ಅವಶ್ಯ. ನದಿಯ ಚಿತ್ರದಿಂದ ಬಾಯಾರಿಕೆ ಇಂಗಿಸಲು ನೀರು ಸಿಗುವುದಿಲ್ಲ. ಬಲ್ಬ್ನ ಚಿತ್ರ ಬರೆಸಿ ಗೋಡೆಯಲ್ಲಿ ತೂಗು ಹಾಕಿದರೆ ಬೆಳಕು ಬರುವುದಿಲ್ಲ. ಆದುದರಿಂದ ಶಾಸ್ತ್ರಾಧ್ಯಯನದ ಜೊತೆ ಸಾಧನೆಯೂ ಸೇರಿರಬೇಕು. ಅಂದರೆ ಮಾತ್ರ ಲೋಕದಲ್ಲಿ ಸರಿಯಾದ ರೀತಿಯಲ್ಲಿ ನಡೆದುಕೊಳ್ಳಲು ಸಾಧ್ಯ.
ಪ್ರಾಪಂಚಿಕ ಮನುಷ್ಯ ಒಂದು ಭಾವಿಯ ತರ. ಒಬ್ಬ ಮನುಷ್ಯನಿಗೆ ಒಂದು ಕುಟುಂಬವನ್ನೋ, ಹತ್ತು ಜನರನ್ನೋ ರಕ್ಷಿಸಬಹುದು. ಆದರೆ ಒಬ್ಬ ತಪಸ್ವಿಯಾದರೊ ಬೋರ್ ವೆಲ್ನಂತೆ (bore-well). ಒಂದು ಹಳ್ಳಿಯವರೆಲ್ಲರನ್ನು ರಕ್ಷಿಸಲು ಸಾಧ್ಯ.. ಸಾಧನೆ ಮಾಡಿದರೆ ನಿಮಗೆ ಮನಸ್ಸು ಒಳ್ಳೆಯದಾಗುವುದು. ಅನೇಕರಿಗೆ ಶಾಂತಿ, ಸಮಾಧಾನ ಹರಡಲು ಸಾಧ್ಯವಾಗುತ್ತದೆ.
ಯಾವ ವಿಚಾರವಾದಿಯೊಂದಿಗೂ ಅಮ್ಮನಿಗೆ ವಿರೋಧವಿಲ್ಲ. ನಿಜವಾದ ಒಬ್ಬ ವಿಚಾರವಾದಿ ವಿಚಾರವಾದವನ್ನು ಅಪ್ಪಿಕೊಳ್ಳುವುದು ಜಗತ್ತಿನ ಅಂಧತೆಯನ್ನು ಹೋಗಲಾಡಿಸಲು. ಆದರೂ ವಿಚಾರವಾದಿ ಎಂದೂ ತನ್ನ ವ್ಯಕ್ತಿತ್ವವನ್ನು ಬಿಟ್ಟು ಕೊಡುವುದಿಲ್ಲ. ಹಾಗಾಗಿ ವ್ಯಕ್ತಿ ಎನ್ನುವ ಭಾವನೆ ಯಾವಾಗಲೂ ನೆಲೆಸಿರುತ್ತದೆ. ಆದರೆ ಒಬ್ಬ ಆಧ್ಯಾತ್ಮಿಕ ಜೀವಿ ತನ್ನ ವ್ಯಕ್ತಿತ್ವವನ್ನು ತೊರೆಯುತ್ತಾನೆ. ತಾನು ಆತ್ಮವೆಂದು, ತಾನು ಆನಂದವೆಂದು ಮೊದಲು ಕಲಿಯುತ್ತಾನೆ. ಈ ಕಾರಣದಿಂದ ಸೊನ್ನೆ ವೋಲ್ಟ್ ಆಗಿದ್ದವನು ಸಾವಿರ ವೋಲ್ಟ್ನವನಾಗಿ ಬದಲಾಗುತ್ತಾನೆ. ಇಂಥ ಶಕ್ತಿ ಸಂಪಾದನೆ ಬೇಕಾಗಿದೆ.
ಲಂಕೆಯಲ್ಲಿ ಸೀತೆಯಿದ್ದಾಳೋ ಎಂದು ತಿಳಿದುಕೊಳ್ಳುವುದಕ್ಕೆ ಸಮುದ್ರ ದಾಟಬೇಕಾಗಿದೆ. ಅದು ಸಾಧ್ಯವಾಗದೆ ವಾನರರೆಲ್ಲ ಬಳಲಿ ಕುಳಿತುಕೊಂಡಿದ್ದಾರೆ. ಲಂಕೆಗೆ ಜಿಗಿಯಲು ಯಾರೂ ತಯಾರಲ್ಲ. ಒಂದು ಮೂಲೆಯಲ್ಲಿ ಸರಿದು ಕೂತಿದ್ದ ಹನುಮಾನನಲ್ಲಿ ’ನಿನಗೆ ಜಿಗಿಯಲು ಸಾಧ್ಯವೇ’ ಎಂದು ಕೇಳಿದರು. ’ ಛೆ, ನನಗೆ ಭಯ, ನನ್ನಿಂದ ಸಾಧ್ಯವಿಲ್ಲಪ್ಪ.’ ಎಂದು ಹನುಮಾನ್ ಹೇಳುತ್ತಾನೆ. ’ಅಲ್ಲ, ನಿನಗೆ ಮಾತ್ರವೆ ಸಾಧ್ಯವಿರುವುದು. ನೀನು ವಾಯುವಿನ ಮಗ. ನಿನ್ನಲ್ಲಿ ಅದಕ್ಕೆ ಬೇಕಾಗಿರುವ ಶಕ್ತಿಯಿದೆ’ ಎಂದು ಮುಂತಾಗಿ ಹೇಳಿ ಹೊಗಳಿದಾಗ ಬಲ ಪಡೆದ ಹನುಮಂತ ಒಂದೇ ನೆಗೆತಕ್ಕೆ ಲಂಕೆಯನ್ನು ಮುಟ್ಟುತ್ತಾನೆ. ಸೀತೆಯನ್ನು ಕಂಡು ಹಿಂತಿರುಗಿ ಬರುತ್ತಾನೆ. ಅದರಂತೆಯೆ, ಭಾರತೀಯ ತತ್ವಶಾಸ್ತ್ರಗಳು ನಮ್ಮಲ್ಲಿ ’ಶಕ್ತಿಯಿದೆ, ಶಕ್ತಿಯಿದೆ’ ಎಂದು ಘೋಷಿಸುತ್ತವೆ.
ಬರೇ ಕೋತಿತರ ಆಡದೆ, ಬೇರೆಯವರ ಕೈಯಿಂದ ಕೇಳಿ ತಿನ್ನದೆ, ದುಡಿದು ತಿನ್ನುವುದನ್ನು ಅಧ್ಯಾತ್ಮ ಕಲಿಸುತ್ತದೆ. ಅಲ್ಲದೆ ಯಾರೋ ಕೊಟ್ಟದ್ದನ್ನು ತಿನ್ನಲಿಕ್ಕಲ್ಲ. ನಿನಗೆ ಬಲವಿದೆಯೆಂದು ನುಡಿದು ಕೋತಿಗೆ ಸಮುದ್ರ ದಾಟಲು ಕಲಿಸುತ್ತದೆ. ಮಂಗನ ಮನಸ್ಸಿನಿಂದ ಒಳ್ಳೆಯ ಮನುಷ್ಯನನ್ನು ಅಚ್ಚು ಹೊಯ್ಯುವುದನ್ನು ಅಧ್ಯಾತ್ಮವು ಮಾಡುತ್ತದೆ.
ವಿಚಾರವಾದವೆಂದು ಹೇಳಿ ನೀವು ಕಲ್ಲನ್ನು ಬಡಿದು ಪುಡಿ ಮಾಡಿದರೆ, ಅದರಿಂದೇನೂ ದೇವರನ್ನು ಕಾಣಲು ಸಾಧ್ಯವಾಗುವುದಿಲ್ಲ. ನೀವು ಅದಲ್ಲ ಸಾಹಸ ಮಾಡಬೇಕಾದದ್ದು. ಮತವೂ, ದೇವರೂ ಈ ಮಣ್ಣಿನಲ್ಲಿ ಬೇರು ಬಿಟ್ಟಿದೆ. ಜನಗಳು ಬೇರು ಗಟ್ಟಿಮಾಡಿ ಬಿಟ್ಟಾಯಿತು. ನಾವಿನ್ನು ಎಷ್ಟು ಕಿತ್ತು ಬಡಿದರೂ, ಕೂಡಲೆ ಏನೂ ಒಡೆದು ತುಂಡಾಗಿ ಹೋಗುವುದಿಲ್ಲ. ಸಾವಿರ ಸಲ ಕಡಿದರೂ ಈ ಬೇರು ತುಂಡಾಗದು. ಆದಕಾರಣ ಅಧ್ಯಾತ್ಮ ಅರ್ಥ ಮಾಡಿಕೊಂಡು ಜಗತ್ತಿನಲ್ಲಿ ಬದುಕಿರಿ. ಜನಗಳನ್ನು ಪ್ರೀತಿಸಿರಿ; ಸೇವೆ ಮಾಡಿರಿ. ಖಂಡಿತವಾಗಿಯೂ ಆ ತತ್ವಗಳನ್ನು ತಿಳಿಸಿ ಕೊಡಿರಿ. ಆಗ ಜನಗಳು ಈ ಗೋಡೆಗಳ ಬಂಧನದಿಂದ ಬಿಡುಗಡೆ ಪಡೆಯುವರು. ಅದು ಬಿಟ್ಟು ಹೊಡೆದಾಟ ಬಡಿದಾಟದಿಂದ ಏನೂ ಸಾಧ್ಯವಿಲ್ಲ. ಹಾಗಾಗಿ ಪ್ರೀತಿಯಿಂದ ತತ್ವವನ್ನು ತಿಳಿಸಿ ಹೇಳಿರಿ. ಹೀಗೆ ಮಾತ್ರವೇ ನಮಗೆ ಅವರನ್ನು ಪರಿವರ್ತಿಸಲು ಸಾಧ್ಯ. ಅದು ಬಿಟ್ಟು ಹೋರಾಟ ನಡೆಸಿ ಅದನ್ನು ಬಡಿದು ಕಡಿಯುವುದಲ್ಲ ಬೇಕಾಗಿರುವುದು. ಹಾಗೆ ತುಂಡು ಮಾಡುವುದೂ ಕಷ್ಟ.
ಅಧ್ಯಾತ್ಮದ ಕಟ್ಟಡ ಕಟ್ಟಿ ನಿಲ್ಲಿಸಿದ್ದಾದರೆ, ಮತದ ಹಾಗೂ ದೇವರ ಕುರಿತು ಸರಿಯಾದ ದೃಷ್ಟಿಕೋಣ ಜನಗಳಲ್ಲಿ ಉಂಟಾಗುತ್ತದೆ. ಅದು ಬಿಟ್ಟು, ವೈಚಾರಿಕತೆ ಮಾತ್ರ ಇಟ್ಟುಕೊಂಡು ಮತವನ್ನು ಒಟ್ಟು ಖಂಡಿಸಲು ಪ್ರಯತ್ನಿಸಿದರೆ ಆ ಬೇರು ತುಂಡಾಗದು. ಯಾಕೆಂದರೆ ವಿಚಾರವಾದಿಗಳು ವೈಚಾರಿಕತೆಯನ್ನು ಹೇಳುತ್ತಾರಾದರೂ ಅವರಲ್ಲಿ ತಪಸ್ಸಿನ ಬಲವಿಲ್ಲ. ನಿಮಗೆ ಹತ್ತು ಜನಗಳನ್ನು ನೋಡಲಿಕ್ಕೆ ಸಾಧ್ಯವಿದ್ದರೆ, ಒಬ್ಬ ತಪಸ್ವಿಗೆ ಕೋಟಿ ಜನಗಳನ್ನು ರಕ್ಷಿಸಲಿಕ್ಕೆ ಸಾಧ್ಯ. ಆದಕಾರಣ ವಿಚಾರವಾದಿಗಳೇ, ನೀವು ಸಾಧನೆ ಮಾಡಿ ಲೋಕದಲ್ಲಿ ಹೊರಡಿ.
ನನ್ನ ನಲ್ಮೆಯ ಮಕ್ಕಳೇ, ನೀವಾಗಿಯೇ ನಶಿಸದಿರಿ. ಸ್ವಂತ ಸುಖವನ್ನು ಮಾತ್ರ ಬಯಸುವುದಾದರೆ ಅದೂ ನಿಮಗೆ ಸಿಗುವುದಿಲ್ಲ. ಆದಕಾರಣ ನೀವೂ ನಶಿಸದೆ, ಜಗತ್ತಿಗೆ ಕೃತಜ್ಞರಾಗಿ ಜೀವಿಸಲು ಸನ್ನದ್ಧರಾಗಬೇಕು. ಇದುವೇ ನಮ್ಮ ಅವಶ್ಯಕತೆ.
ಸಾಮಾನ್ಯವಾಗಿ ನಾವು ಹೇಳುವುದಿದೆ, “ನನಗೆ ಮನೆಯಿದೆ, ಇಷ್ಟು ಸೆಂಟು ಭೂಮಿಯಿದೆ” ಎಂದೆಲ್ಲ. (ಒಂದು ಎಕ್ರೆಗೆ ನೂರು ಸೆಂಟುಗಳು.) ಅದರ ಅರ್ಥ, ಉಳಿದದ್ದೇನೂ ನಮ್ಮದಲ್ಲ ಅಂತ. “ನನ್ನ ಮನೆ, ನನ್ನ ಭೂಮಿ” ಎಂದು ಹೇಳುತ್ತೇವೆ. ಆ ನಾಲ್ಕು ಗೋಡೆಗಳೊಳಗೆ ಏಳು ಮಾಳಿಗೆಗಳಿದ್ದರೂ, ಅದರ ಮೇಲೆ ಇರುವ ಇರುವೆ ಹೇಳುತ್ತದೆ, “ನನ್ನ ಮನೆ” ಎಂದು, ಕಾಗೆಯೂ ಬಂದು ಹೇಳುತ್ತದೆ “ನನ್ನ ಮನೆ”. ಅಲ್ಲಿ ಬೆಳೆದಿರುವ ಕೋಳಿಯೂ ಬಂದು ಹೇಳುತ್ತದೆ “ನನ್ನ ಮನೆ” ಎಂದು. ಇನ್ನೊಂದು ಕೋಳಿ ಅಲ್ಲಿ ಬಂದರೆ ಇದರ ಮನೋಭಾವ ಬದಲಾಗುವುದು, ಕಚ್ಚಿ ಓಡಿಸುತ್ತದೆ. ಯಾರದ್ದು ಮನೆ ? ಯಾರದ್ದು ಭೂಮಿ ? ಈ ಹತ್ತು ಸೆಂಟೆನ್ನುವುದೂ, ನನ್ನದೆನ್ನುವುದೂ ಬಿಟ್ಟು ಬಿಟ್ಟರೆ, ಈ ಪ್ರಪಂಚ ಪೂರ್ತಿ ನಮ್ಮದಾಗಿ ಬಿಡುತ್ತದೆ. ಆದಕಾರಣ ನೀವು ಇವತ್ತಿನ ಪಾಯಿಂಟ್ನಲ್ಲಿರದೆ, ವಿಶಾಲತೆಯತ್ತ ಹೊರಳಿರಿ. ಅದು ಬಿಟ್ಟು ಪಾರ್ಟಿಯೆಂದೋ, ಮತ್ತೊಂದೋ ಹೇಳಿ ಜೀವನವನ್ನು ನಾಶ ಮಾಡದಿರಿ. ಆಗಬೇಕಾದದ್ದು ಆಗುತ್ತದೆ. ಅಲ್ಲದಿರುವುದು ಆಗುವುದಿಲ್ಲ. ರಾಷ್ಟ್ರದ ಭವಿಷ್ಯ ನಿಮ್ಮಂತ ಯುವಕರ ಮೇಲೆ ನಿಂತಿದೆ.
ಇಂದು ಎಲ್ಲರು ಕೊಳೆ ತುಂಬಿದ ಕೊಳದಲ್ಲಿ, ಕ್ರಿಮಿಗಳಾಗಿದ್ದುಕೊಂಡು ಕೆಸರು ತಿನ್ನುತ್ತಿದ್ದಾರೆ. ಆದರೆ ಕ್ರಿಮಿಗಳಿಗೆ ರೆಕ್ಕೆಗಳಿವೆ. ಆದರೆ ಅದನ್ನು ಮಾತ್ರ ತಿಳಿದು ಕೊಳ್ಳುತ್ತಿಲ್ಲ. ಹಾಗಾಗಿ ಕೊಳದ ಪಕ್ಕದಲ್ಲಿಯ ಹೂದೋಟದ ಜೇನನ್ನು ಹೀರಲು ಸಾಧ್ಯವಿಲ್ಲ. ಅವುಗಳು ಕೆಸರು ಮಾತ್ರ ತಿಂದು, ತಿಂದು ಜೀವನ ಸಾಗಿಸುತ್ತಿವೆ. ಅದರಿಂದಾಗಿ ಈ ಕ್ರಿಮಿಗಳಿಗೆ ಜೋರಾಗಿ ಕಿರುಚಿ ಹೇಳ ಬೇಕಾಗುತ್ತದೆ. ಆಗ ಅವುಗಳಿಗೆ ರೆಕ್ಕೆಯಿರುವ ಮಾತು ನೆನಪಾಗುತ್ತದೆ; ಹಾರುತ್ತವೆ; ಜೇನನ್ನು ಸವಿಯುತ್ತವೆ. ಹೀಗೆ, ಆ ಒದರಾಟವೇ ನಿಮಗೆ ಸಾಕು. ಆದಕಾರಣ ನೀವು ಅದನ್ನು ಎಬ್ಬಿಸಿರಿ ! ಶುದ್ಧೀಕರಿಸಿರಿ ! ಶಕ್ತಿ ಸಂಪಾದಿಸಿರಿ !

Download Amma App and stay connected to Amma