ಪ್ರಶ್ನೆ: ಸಾಧಕನು ಸಿಟ್ಟಾಗಬಾರದೆಂದು ಹೇಳುವುದು ಏತಕ್ಕಾಗಿ?
“ನಲ್ಮೆಯ ಮಕ್ಕಳೇ, ಒಬ್ಬ ಆಧ್ಯಾತ್ಮಿಕ ಜೀವಿಯು ಎಂದೂ ಕೋಪ ಮಾಡಬಾರದು. ಕೋಪವು ನಾವು ಸಾಧನೆಯ ಮೂಲಕ ಗಳಿಸಿದ ಶಕ್ತಿಯನ್ನು ನಷ್ಟಪಡಿಸುವುದು. ಗಾಡಿ ಓಡುತ್ತಿರಬೇಕಾದರೆ ಪೆಟ್ರೋಲ್ ಅಷ್ಟಾಗಿ ಖರ್ಚಾಗುವುದಿಲ್ಲ; ಆದರೆ ಬ್ರೇಕ್ ಅದುಮಿದಾಗ ಹೆಚ್ಚು ಖರ್ಚಾಗುತ್ತದೆ. ಇದೇ ರೀತಿ ಮಕ್ಕಳೇ, ಕೋಪ ಬಂದಾಗ. ಕೋಪ ಬಂದಾಗ ಬರೇ ಬಾಯಿಯಿಂದ ಮಾತ್ರವಲ್ಲ, ಪ್ರತಿಯೊಂದು ರೋಮ ಕೂಪದಿಂದಲೂ ಶಕ್ತಿಯ ವ್ಯಯವಾಗುತ್ತದೆ. ಒಂದು ಸಿಗರೇಟು ಲೈಟರನ್ನೂ ಹತ್ತಿಪ್ಪತ್ತು ಬಾರಿ ಅದುಮಿದರೆ ಅದರ ಪೆಟ್ರೋಲ್ ನಷ್ಟವಾಗುತ್ತದೆ. ಆದರೆ ಇದು ನಮಗೆ ಕಾಣಲು ಸಾಧ್ಯವಾಗುವುದಿಲ್ಲ; ಆದರೆ ಗೊತ್ತಾಗುತ್ತದೆ. ಇದೇ ಪ್ರಕಾರವಾಗಿ ಮಕ್ಕಳೇ, ಸದ್ಚಿಂತನೆಗಳಿಂದ ಗಳಿಸಿದ ಶಕ್ತಿಯು ಹಲವಾರು ಕಾರಣಗಳಿಂದಾಗಿ ನಷ್ಟವಾಗುತ್ತದೆ. ಇದನ್ನು ನಾವು ತಿಳಿದುಕೊಂಡಿರಬೇಕು.
ಮಕ್ಕಳೇ, ತುಂಬ ಹೆಚ್ಚಿನ ಎಚ್ಚರದಿಂದ ಮಾತ್ರ ಆಧ್ಯಾತ್ಮಿಕ ಜೀವಿಗೆ ಮುಂದುವರಿಯಲು ಸಾಧ್ಯವಾಗುವುದು. ಒಬ್ಬ ಸೂಜಿ ತೆಗೆದರೆ, ತೆಗೆಯುವಾಗಲೂ, ನೂಲು ಪೋಣಿಸುವಾಗಲೂ, ಹೊಲಿಯುವಾಗಲೂ, ಮರಳಿಡುವಾಗಲೂ ಎಷ್ಟೆಲ್ಲ ಎಚ್ಚರದಿಂದ ಮಾಡುತ್ತಾನೋ, ಅಷ್ಟು ಎಚ್ಚರ ನಮ್ಮ ಪ್ರತಿಯೊಂದು ಕೆಲಸದಲ್ಲೂ ಇರಬೇಕು. ಮಕ್ಕಳೇ, ನಿರಂತರವಾದ ಎಚ್ಚರ ಮಕ್ಕಳನ್ನು ಜಯಶಾಲಿಗಳನ್ನಾಗಿ ಮಾಡುವುದು. ಏನು ಕಂಡರೂ, ಏನು ಕೇಳಿದರೂ, ಏಕಾಂತದಲ್ಲಿ ವಿಚಾರ ಮಾಡಿ. ಅದರ ನಂತರವೇ ತೀರ್ಮಾನ ಮಾಡಬೇಕು. ಎಂದಿಗೂ, ಪರಿಸ್ಥಿತಿಯ ದಾಸರಾಗಬೇಡಿ. ಅವುಗಳಿಂದ ಪಾರಾಗಲೆತ್ನಿಸಿರಿ.
ಪ್ರಶ್ನೆ: ಬಹಳ ದಿನಗಳಿಂದ ಜಪವನ್ನೂ ಧ್ಯಾನವನ್ನೂ ತಪ್ಪದೆ ಮಾಡುತ್ತಿದ್ದೇನೆ. ಆದರೆ ಸರಿಯಾದ ಏಕಾಗ್ರತೆ ಇಷ್ಟು ದಿನಗಳಾದರೂ ನಾನು ಸಂಪಾದಿಸಿಲ್ಲ !
“ಮಕ್ಕಳೇ, ಇಷ್ಟು ದಿನವೂ ಮನಸ್ಸು ನಿತ್ಯ, ಶರೀರ ನಿತ್ಯ ಎಂದು ಕೊಂಡೆವು; ಆಸೆಗಳಿಗೆ ತಕ್ಕಂತೆ ಆಹಾರ ಕೊಟ್ಟು ಅವುಗಳನ್ನು ಪೋಷಿಸಿ ಬೆಳೆಸಿದೆವು. ಈಗ ಆತ್ಮವೇ ನಿತ್ಯವೆನ್ನುವಾಗ ಅವುಗಳು ಥಟ್ಟನೆ ತಲೆ ಬಾಗಿಸುವುದೇ ? ಇಲ್ಲ. ನಿರಂತರ ಅಭ್ಯಾಸದಿಂದಲೇ ಸಾಧ್ಯ. ದೋಣಿ ಮಾಡಲು ಉಪಯೋಗಿಸುವ ಹಲಗೆ ಬಗ್ಗುವಂತಾಗಲು ಅದಕ್ಕೆ ಸ್ವಲ್ಪ ಬಿಸಿ ಮುಟ್ಟಿಸುತ್ತಾರೆ. ಈ ಪ್ರಕಾರ ಜಪ ಧ್ಯಾನಗಳು ಉಂಟು ಮಾಡುವ ಬಿಸಿ. ಸರಳತೆ, ವಿನಯ ಮೊದಲಾದ ಭಾವಗಳು, ಇವೆಲ್ಲ ಇದ್ದರೆ ಮಾತ್ರವೇ ಮನದ ಅಹಂಕಾರವು ಪರಿವರ್ತನೆಯಾಗಿ ಆತ್ಮ ಸ್ವರೂಪವಾಗಲು ಸಾಧ್ಯ.
ಒಂದು ಪಾತ್ರೆಗೆ ಸೀಸ ಹಚ್ಚಬೇಕಾದರೆ, ಮೊದಲು ಸೀಸದಿಂದ ಕಷ್ಮಲವನ್ನು ಬೇರ್ಪಡಿಸಬೇಕು. ಇದೇ ಪ್ರಕಾರ ಮೊದಲು ನಮ್ಮೊಳಗಿನ ಕಲೆಗಳನ್ನು ನಿವಾರಿಸಿಕೊಳ್ಳಬೇಕು. ಅಲ್ಲದೆ ಹೋದರೆ ಎಷ್ಟು ಸಾಧನೆ ನಡೆಸಿದರೂ ಪ್ರಯೋಜನವಿಲ್ಲ. ಕಷ್ಮಲಗಳ ನಿವಾರಣೆಗೆ, ಈಶ್ವರನನ್ನು ಅತ್ತು ಪ್ರಾರ್ಥಿಸಬೇಕು.
ಏಕಾಗ್ರತೆ ಸಿಗುವುದಿಲ್ಲವೆಂದು ಹೇಳಿಕೊಂಡು ಮಗನು ಸಾಧನೆಗೆ ಭಂಗ ತರಬಾರದು. ಒಬ್ಬನಿಗೆ ತೆಂಗಿನ ಮರ ಹತ್ತಲು ಕಲಿಯಬೇಕು. ಒಂದೇ ದಿವಸದಲ್ಲಿ ಸಾಧ್ಯವೇ ? ಒಂದೊಂದು ಕಾಲು ಎತ್ತಿ ಮೇಲೆ ಇಟ್ಟು, ಕೈಗಳಿಂದ ಬಿಗಿಯಾಗಿ ಹಿಡಿದು, ಹತ್ತಲು ಪ್ರಯತ್ನಿಸಬೇಕು. ಕೆಲವೊಮ್ಮೆ ಚರ್ಮ ಸುಲಿದು ಹೋಗಲೂ ಬಹುದು. ಆದರೂ ಬಿಡದ ಪ್ರಯತ್ನದ ಫಲವಾಗಿ, ಅವನಿಗೆ ಯಾವ ತೆಂಗಿನ ಮರ ಹತ್ತಲೂ ಸಾಧ್ಯವಾಗುತ್ತದೆ. ಸರಿಯಾದ ಏಕಾಗ್ರತೆ ಆರಂಭದಲ್ಲಿ ಸಿಗುವುದಿಲ್ಲ. ಮಕ್ಕಳೇ, ಅದಕ್ಕೆ ನಿರಂತರ ಅಭ್ಯಾಸ ಬೇಕು.”