ಹಿಂದಿನ ಕಾಲದಲ್ಲೆಲ್ಲ ಕಾಡು ಹೊರಗಿರುತ್ತಿತ್ತು. ಈಗ ಕಾಡನ್ನು ಕಡಿದು ಸವರಿ ನಮ್ಮೊಳಗೇ ತಂದಿದ್ದೇವೆ. ಹಿಂದೆ ಪ್ರಾಣಿಗಳು ಹೊರಗಿರುತ್ತಿದ್ದವು. ಇಂದು ಅವುಗಳನ್ನೂ ಆಂತರ್ಯದಲ್ಲಿ ತಂದಿದ್ದೇವೆ. ಹೃದಯದ ಕಲ್ಮಶಗಳನ್ನು ನಾವು ಶೇವ್ ಮಾಡಿ ತೆಗೆಯಬೇಕಾದದ್ದು; ಬದಲಿಗೆ ನಮ್ಮ ಮುಖದ್ದು ಅಲ್ಲ.

ಮಕ್ಕಳು ಏನೂ ತ್ಯಜಿಸಬೇಕೆಂದು ಅಮ್ಮ ಹೇಳುತ್ತಿಲ್ಲ. ಅನ್ಯರಲ್ಲಿ ಕರುಣೆ ತೋರಿಸಿದಾಗ, ಸ್ವಾರ್ಥ ತಾನಾಗಿಯೇ ಬಿಟ್ಟು ಹೋಗುತ್ತದೆ. ನೀವು ಒಂದು ದಿನಕ್ಕೆ ಹತ್ತು ರುಪಾಯಿ ಸಿಗರೇಟು ಸೇದುತ್ತೀರ ಎಂದು ಇಟ್ಟುಕೊಳ್ಳೋಣ. ತಿಂಗಳಿಗೆ ಮುನ್ನೂರು ರುಪಾಯಿ ಆಯಿತು. ಈ ತರಹ ಲೆಕ್ಕ ಹಾಕಿದರೆ ವರ್ಷಕ್ಕೆ ಎಷ್ಟು ರುಪಾಯಿ ಆಗುವುದು ? ಆನಂದ ಸಿಗರೇಟಿನಲ್ಲಿಲ್ಲ – ನಮ್ಮೊಳಗೇ ಇದೆ. ಇದನ್ನು ನಾವು ಅರಿತು ಕೊಳ್ಳುತ್ತಿಲ್ಲ. ಇದನ್ನು ಅರಿತುಕೊಳ್ಳಬೇಕಾದರೆ ಹೃದಯ ಶುದ್ಧ ಮಾಡಿಕೊಳ್ಳಬೇಕು. ಹೃದಯ ಶುದ್ಧಿ ಬೇಕೆಂದಿದ್ದರೆ ಒಳ್ಳೆ ಗುಣಗಳನ್ನು ಬೆಳೆಸಿಕೊಳ್ಳಬೇಕು, ದೇವರಲ್ಲಿ ಪ್ರೇಮ ಬೆಳೆಸಿಕೊಳ್ಳಬೇಕು. ಮಕ್ಕಳು ಕೇಳಬಹುದು, “ಹಾಗೆ ಮಾಡಿದರೆ ಸಿಗರೇಟು ಕಂಪೆನಿಗಳು ಏನು ಮಾಡಬೇಕು ? ” ಎಂದು. ಸಿಗರೇಟ್ ಸೇದುವುದು ಆರೋಗ್ಯಕ್ಕೆ ಹಾನಿಕರವೆಂದೂ, ನಿಮ್ಮ ಮನಸ್ಸನ್ನೂ ಶರೀರವನ್ನೂ ನಾಶ ಮಾಡುತ್ತದೆಂದೂ ಕಂಪೆನಿಗಳವರೇ ಹೇಳುತ್ತಾರಲ್ಲವೇ ? ಹಾಗಾಗಿ ವಿವೇಕವುಳ್ಳ ಮಕ್ಕಳು ಅದರಿಂದ ಹಿಂದೆ ಸರಿಯಲಿ.
ಮಕ್ಕಳೇ, ಸುತ್ತಲೂ ಎಷ್ಟು ಬಡವರು ಮನೆಯಿಲ್ಲದೆಯೂ, ಬಟ್ಟೆಯಿಲ್ಲದೆಯೂ, ಊಟಕ್ಕಿಲ್ಲದೆಯೂ, ಚಿಕಿತ್ಸೆಗೆ ಹಣವಿಲ್ಲದೆಯೂ ಕಷ್ಟಪಡುತ್ತಿಲ್ಲ ? ಒಂದು ವರ್ಷದ ನಿಮ್ಮ ಸಿಗರೇಟಿನ ಖರ್ಚಿನಿಂದ, ಒಬ್ಬ ಬಡವನಿಗೆ ರಾತ್ರಿ ಮಲಗಿಕೊಳ್ಳುವುದಕ್ಕೆ ಒಂದು ಝೋಪಡಿ ಕಟ್ಟಿಕೊಡಬಹುದು. ಅವರಲ್ಲಿ ಕರುಣೆ ಹುಟ್ಟಿದಾಗ ನಮ್ಮ ಸ್ವಾರ್ಥ ತಾನಾಗಿಯೇ ಬಿಟ್ಟು ಹೋಗುತ್ತದೆ. ನಾವು ಏನನ್ನೂ ತ್ಯಜಿಸದೆಯೂ ಅನ್ಯರ ಸುಖದಲ್ಲಿ ಸಂತೃಪ್ತಿ ಪಡೆಯುತ್ತೇವೆ. ಹೀಗೆ ಪ್ರತಿಯೊಂದು ಸ್ವಾರ್ಥವೂ ಬಿಟ್ಟು ಹೋದಾಗ ನಾವು ದೇವರ ಕೃಪೆಗೆ ಪಾತ್ರರಾಗುತ್ತೇವೆ. ಸ್ವಾರ್ಥ ಬಿಟ್ಟು ಹೋದಾಗ ನಮ್ಮಲ್ಲಿರುವ ದಯೆ, ಕರುಣೆ ಮುಂತಾದ ಎಲ್ಲಾ ಗುಣಗಳು ನಮ್ಮಲ್ಲಿ ಬೆಳಗುತ್ತದೆ. ದುರ್ಗುಣಗಳು ಇಲ್ಲವಾಗುತ್ತದೆ.
ಮಕ್ಕಳೇ, ಬೇರೆಯವರ ತಪ್ಪನ್ನು ನೋಡಬೇಡಿ. ಅವುಗಳನ್ನು ಗಮನಿಸುವಾಗ ನಮ್ಮ ಹೆಜ್ಜೆಗಳಲ್ಲಿ ನಮ್ಮ ಗಮನ ತಪ್ಪಬಹುದು. ನಾವು ಹೊಂಡಕ್ಕೆ ಬೀಳಬಹುದು. ಮಕ್ಕಳೇ ತೆಂಗಿನ ಮರ ಹೇಳುತ್ತದೆ “ನಾನು ಬ್ರಹ್ಮನ್” ಎಂದು. ತೆಂಗಿನ ಕಾಯಿಯೂ ಹೇಳುತ್ತದೆ “ನಾನು ಬ್ರಹ್ಮನ್” ಎಂದು. ಫಲತುಂಬಿ ನಿಂತಿದ್ದ ತೆಂಗಿನ ಮರ ಫಲ ನೀಡಲು ತೊಡಗಿತು. ತೆಂಗಿನ ಕಾಯಿಯೋ. ಅದು ಬರೇ ಅಂಶ ಮಾತ್ರವೇ ಆಗಿರುವುದು. ಯಮನಿಯಮಗಳೊಂದಿಗೆ ನಾವೂ ಬ್ರಹ್ಮತ್ವವನ್ನು ಮುಟ್ಟಬಹುದು. ಆದಕಾರಣ ನಾನು ಬ್ರಹ್ಮನೆಂದು ಹೇಳಿಕೊಂಡು, ಅನುಷ್ಠಾನ ಮಾಡದೆ ನಡೆದಾಡಬೇಡಿ.
ಕೆಲವರು ಕಾವಿ ಬಟ್ಟೆ ಉಟ್ಟು ತಾನು ಸಂನ್ಯಾಸಿಯೆಂದು ಹೆಮ್ಮೆ ಪಡುತ್ತಾರೆ. “ಮಾರಾಂಬು”* ಗಿಡದಂತೆ ಅವರು. ಬೇರುಸಮೇತ ಕಿತ್ತರೆ ಬುಡದಲ್ಲಿ ಏನೂ ಕಾಣಿಸುವುದಿಲ್ಲ. ಕಾವಿ ಬೆಂಕಿಯ ಬಣ್ಣ. ಶರೀರ ಬೋಧವನ್ನು ಸುಟ್ಟವರು ಇದನ್ನು ಧರಿಸಲು ಯೋಗ್ಯತೆಯುಳ್ಳವರು. ಸಂನ್ಯಾಸಿಗಳು ಸರ್ವಸಂಗ ಪರಿತ್ಯಾಗಿಗಳಾಗಬೇಕು. ಆ ಹಂತದಲ್ಲಿ ಮಾತ್ರ ಕಷಾಯ ಧರಿಸಲು ಅರ್ಹತೆ ಬರುವುದು.
ಮಕ್ಕಳೇ, ಮನೆಯ ಪ್ಲ್ಯಾನ್ ಬರೆಸಿ, ಅದರಲ್ಲಿ ವಾಸಿಸಲು ಬರುವುದೋ ? ಶಾಸ್ತ್ರವೂ ಹಾಗೆಯೇ. ಅದನ್ನು ಅನುಭವಿಸಿ ತಿಳಿಯಬೇಕು. ಸಕ್ಕರೆ ಎಂದು ಬರೆದು ಅದನ್ನು ನೆಕ್ಕಿದರೆ ಸಿಹಿ ಸಿಗುವುದಿಲ್ಲ. “ಕನ್ಯಾಕುಮಾರಿಯಲ್ಲಿ ಚಿನ್ನವಿದೆ” ಎಂಬ ಒಂದು ಬೋರ್ಡು ಕೊಲ್ಲ್ಯಂನಲ್ಲಿದೆ. ** ಬೋರ್ಡನ್ನು ಕೇಳಿದರೆ ಚಿನ್ನ ಸಿಗುವುದೇ ? ಹೋಗಿ ಖರೀದಿಸಬೇಕು ನಾವು. ಅದಕ್ಕೆ ಬೇಕಾದದ್ದನ್ನು ಮಾಡಬೇಕು. ಶಾಸ್ತ್ರಗಳಲ್ಲಿ ಹೇಳಿರುವುದನ್ನು ಅನುಭವಗತ ಮಾಡಿಕೊಳ್ಳಬೇಕೆಂದಿದ್ದರೆ ಅನುಷ್ಠಾನ ಬೇಕು.
ಮಕ್ಕಳೇ, ಈ ಲೋಕದಲ್ಲಿ ಯಾರಿಗೆ ಯಾರೂ ತಮ್ಮವರಲ್ಲ. ಯಾರೂ ನಿಷ್ಕಾಮ ಪ್ರೀತಿ ಕೊಡುವುದಿಲ್ಲ. ಮನುಷ್ಯನ ಪ್ರೀತಿಯು ಯಾವುದಾದರೂ ಆಸೆಯ ಹಿಂದಿರುತ್ತದೆ. ಹೆಂಡತಿಯಲ್ಲಿರುವುದು ನಿಜವಾದ ಪ್ರೇಮವೇ? ಇನ್ಯಾರನ್ನಾದರೂ ತನ್ನ ಅನುಮತಿಯಿಲ್ಲದೆ ನೋಡಿದರೋ, ಅವರ ಜೊತೆ ಮಾತಾಡಿದರೋ, ಸಂಶಯದಿಂದ ಹೆಂಡತಿಯನ್ನು ಕೊಲ್ಲಲೂ ಗಂಡ ತಯಾರು. ಎಲ್ಲರಿಗೂ ತಮ್ಮದೇ ಅಂತ ಇರುವ ಒಂದೇ ಒಂದು ಸತ್ಯ ದೇವರು ಮಾತ್ರ. ಅಲ್ಲಿ ಆಸೆಯೂ ಇಲ್ಲ, ಬೇರೆ ಏನೂ ಇಲ್ಲ.
ಮಕ್ಕಳೇ, ದೇವರಿಗಾಗಿ ಕಣ್ಣೀರು ಹರಿಸಿ. ಅದು ಬಿಟ್ಟು ಯಾರೋ ಜಗಳಾಡಿದರೆಂದೋ, ಏನಾದರೂ ಹೇಳಿದರೆಂದೋ ಯೋಚಿಸಿ ದುಃಖಿಸಬೇಡಿ. ಮಕ್ಕಳೇ, ಎಲ್ಲೂ ದೋಷ ಕಾಣಬೇಡಿ. ಒಳ್ಳೆಯದನ್ನು ಮಾತ್ರ ಕಾಣಲು ಪ್ರಯತ್ನಿಸಿ. ದೇವರು ನಿಮ್ಮನ್ನು ಅನುಗ್ರಹಿಸುವನು.
__________
*ಸುವರ್ಣ ಗೆಡ್ಡೆಯ ಗಿಡದಂಥ ಒಂದು ಬಗೆಯ ಕಾಡು ಗಿಡ; ಬಹಳ ದೊಡ್ಡದಾಗಿ ಹುಲುಸಾಗಿ ಬೆಳೆದರೂ, ಬುಡದಲ್ಲಿ ಯಾವುದೇ ತರದ ಗೆಡ್ಡೆಯಿರದೆ ಬೋಳಾಗಿರುತ್ತದೆ
**ಕೊಲ್ಲ್ಯಂ – ಜಿಲ್ಲೆಯ ಮುಖ್ಯ ಪಟ್ಟಣ – ಅಲ್ಲಿಂದ 160 ಕಿಲೊಮೀಟರ್ ದಕ್ಷಿಣಕ್ಕೆ, ಮೂರು ಸಾಗರಗಳು ಸಂಗಮವಾಗುವಲ್ಲಿ ಕನ್ಯಾಕುಮಾರಿ ಇದೆ.

Download Amma App and stay connected to Amma